

ನವದೆಹಲಿ: ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರು ವಿಡಿಯೋ ಡೇಟಿಂಗ್ ಆ್ಯಪ್ FancyU ವಿರುದ್ಧ ತಿರುಗಿಬಿದ್ದಿದ್ದು, ತನ್ನ ಒಪ್ಪಿಗೆ ಇಲ್ಲದೆಯೇ ಫೋಟೋ ಬಳಸಿದ್ದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ನುಸ್ರತ್, ಆ್ಯಪ್ ವಿರುದ್ಧ ದೂರು ನೀಡಿದ್ದು, ನನ್ನ ಅನುಮತಿ ಇಲ್ಲದೆ FancyU ಆ್ಯಪ್ ನನ್ನ ಫೋಟೋ ಬಳಸಿದೆ. ಇದು ನಿಜಕ್ಕೂ ಸ್ವೀಕೃತವಲ್ಲ. ಈಗಾಗಲೇ ನಾನು ಕಾನೂನು ಕ್ರಮದ ಹೆಜ್ಜೆ ಇಟ್ಟಿದ್ದೇನೆಂದು ಕೋಲ್ಕತ ಸೈಬರ್ ಸೆಲ್ ಪೊಲೀಸರು ಮತ್ತು ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದು, ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕೋಲ್ಕತ ಅಪರಾಧ ವಿಭಾಗದ ಜಂಟಿ ಆಯುಕ್ತರು ತಕ್ಷಣ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.
ಯಾವುದು ಈ FancyU ಆ್ಯಪ್?
FancyU ಆ್ಯಪ್ ತನ್ನ ಬಳಕೆದಾರರಿಗೆ ಜಾಗತಿಕವಾಗಿ ಯಾರೊಂದಿಗಾದರೂ ವಿಡಿಯೋ ಚಾಟ್ ಮಾಡಲು ಅನುಮತಿ ನೀಡುತ್ತದೆ. ತನ್ನ ಜಾಹಿರಾತು ಪೋಸ್ಟರ್ನಲ್ಲಿ ಆ್ಯಪ್ ನುಸ್ರತ್ ಅವರ ಫೋಟೋ ಬಳಸಿಕೊಂಡಿದ್ದು, ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಇನ್ನು ಕೋವಿಡ್ ಲಾಕ್ಡೌನ್ನಿಂದಾಗಿ ವಿಡಿಯೋ ಚಾಟ್ ಆ್ಯಪ್ ಈಗಾಗಲೇ ಲಕ್ಷಾಂತರ ಬಳಕೆದಾರರನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ. ಗೂಗಲ್ ಪ್ಲೇಸ್ಟೋರ್ನಲ್ಲಿ ಲಕ್ಷಾಂತರ ಮಂದಿ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. (ಏಜೆನ್ಸೀಸ್)