ಬಚ್ಚಿಟ್ಟ 'ಸತ್ಯ'ದ ಹುಡುಕಾಟದಲ್ಲಿ ಸಂತೋಷ್​, ರಂಜಿನಿ; ಮೋಷನ್ ಪೋಸ್ಟರ್ ಬಿಡುಗಡೆ

Sathyam
Published on

ಬೆಂಗಳೂರು: ಸಂತೋಷ್ ಬಾಲರಾಜ್​ ಇದುವರೆಗೂ ಕಾಣಿಸಿಕೊಂಡಿದ್ದು ಮಾತ್ರ ಚಿತ್ರಗಳಲ್ಲೇ ಹೆಚ್ಚು. 'ಕೆಂಪ', 'ಕರಿಯ ೨', 'ಗಣಪ' ಹೀಗೆ ರೌಡಿಸಂ ಹಿನ್ನೆಲೆಯ ಚಿತ್ರಗಳಲ್ಲೇ ನಟಿಸಿದ್ದ ಅವರು, ಇದೀಗ ಫ್ಯಾಮಿಲಿ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದೇ 'ಸತ್ಯಂ'.

೪೦ ವರ್ಷಗಳ ಹಿಂದೆ ರಾಜಮನೆತನವೊಂದರಲ್ಲಿ ನಡೆದ ಕಳಂಕದಿಂದಾಗಿ ಆ ಇಡೀ ವಂಶವೇ ಬಲಿಯಾದ ದಂತಕಥೆಯೊಂದನ್ನು ನಿರ್ದೇಶಕ ಅಶೋಕ್ ಕಡಬ ಅವರು 'ಸತ್ಯಂ' ಹೆಸರಿನಲ್ಲಿ ತೆರೆಮೇಲೆ ತರುತ್ತಿದ್ದಾರೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ 'ಕನ್ನಡತಿ' ಖ್ಯಾತಿಯ ರಂಜಿನಿ ರಾಘವನ್​ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇತೀಚೆಗೆ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ.

ಇದೊಂದು ಸತ್ಯಘಟನೆಯನ್ನಾಧರಿಸಿದ ಚಿತ್ರವಂತೆ. 'ಒಂದು ಬಲವಾದ ಕಾರಣದಿಂದ ನಾಯಕಿಯ ಮನೆಗೆ ಬರುವ ನಾಯಕ ಏನೆಲ್ಲ ಎದುರಿಸಬೇಕಾಯಿತು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಉಡುಪಿ, ಚಿಕ್ಕಮಗಳೂರು, ಮಂಗಳೂರು ಸುತ್ತಮುತ್ತ ೮೫ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದ್ದು, ಡಿಐ ನಡೆಯುತ್ತಿದೆ. ಶೇ.೪೦ರಷ್ಟು ರಾತ್ರಿಯಲ್ಲೇ ನಡೆಯುವ ಈ ಕಥೆಯಲ್ಲಿ ಭೂತಾರಾಧನೆ ಪ್ರಮುಖವಾಗಿ ಬರುತ್ತದೆ. ಕಥೆಗೊಂದು ತಿರುವು ನೀಡುತ್ತದೆ' ಎಂದರು.

ಸಂತೋಷ್​ಗೆ ಇದು ಆರನೇ ಚಿತ್ರವಂತೆ. 'ಆಕ್ಷನ್​ ಚಿತ್ರಗಳಲ್ಲೇ ಹೆಚ್ಚು ನಟಿಸಿರುವ ನಾನು, ಫ್ಯಾಮಿಲಿ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಸಾಕಷ್ಟು ಹಿರಿಯ ಕಲಾವಿದರ ಜೊತೆ ನಟಿಸುವ ಅವಕಾಶ ಇದರಲ್ಲಿ ಸಿಕ್ಕಿದೆ' ಎಂದು ಹೇಳಿದರು. ಇನ್ನು, ನಾಯಕಿ ರಂಜನಿ ಮಾತನಾಡಿ, 'ಇದು ನನ್ನ ೪ನೇ ಚಿತ್ರ. ನಾಯಕನ ಜೊತೆ ತುಂಬಾ ಸಲುಗೆಯಿಂದಿರುತ್ತಾಳೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ' ಎಂದು ಹೇಳಿದರು.

ಶ್ರೀಮಾತಾ ಕ್ರಿಯೇಷನ್ಸ್ ಮೂಲಕ ಮಹಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಸುಮನ್, ಅವಿನಾಶ್, ಸಯ್ಯಾಜಿ ಶಿಂಧೆ, ವಿನಯಾ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net