

ಬೆಂಗಳೂರು: 'ಬಿಚ್ಚುಗತ್ತಿ' ನಂತರ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ನಟ ರಾಜವರ್ಧನ್. ಅದರಲ್ಲೊಂದು 'ಪ್ರಣಯಂ'. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮೊದಲು ಸೋಮವಾರ ಸಂಜೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಈ ಹಿಂದೆ 'ಪಲ್ಲಕ್ಕಿ', 'ಗಣಪ', 'ಕರಿಯಾ ೨', 'ಪಾರಿಜಾತ' ಮುಂತಾದ ಸಿನಿಮಾಗಳನ್ನು ನಿರ್ಮಿಸಿರುವ ಪರಮೇಶ್, ಈ ಚಿತ್ರವನ್ನು ನಿರ್ಮಿಸುವುದರ ಜತೆಗೆ ಕಥೆಯನ್ನೂ ರಚಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ಕಥೆಯನ್ನೂ ರಚಿಸಿದ್ದಾರೆ. ನಿಶ್ಚಿತಾರ್ಥವಾದ ನವಜೋಡಿಯ ನಡುವಿನ ಲವ್ಸ್ಟೋರಿ ಇದಾಗಿದ್ದು, ಈ ಚಿತ್ರವನ್ನು ದತ್ತಾತ್ರೇಯ ನಿರ್ದೇಶಿಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡುವ ಪರಮೇಶ್, 'ಈ ಕಥೆ ಬಹಳ ದಿನಗಳಿಂದ ನನ್ನನ್ನು ಕಾಡುತ್ತಿತ್ತು. ದತ್ತಾತ್ರೇಯ ಅದಕ್ಕೊಂದು ಚಿತ್ರಕಥೆ ಮಾಡಿಕೊಟ್ಟರು. ನಾನು ಇದುವರೆಗೂ ಹೆಚ್ಚಾಗಿ ಹೊಸಬರ ಜತೆಗೆ ಸಿನಿಮಾ ಮಾಡಿದವರು. ಈ ಸಿನಿಮಾದಲ್ಲೂ ಬಹುತೇಕ ಹೊಸಬರಿದ್ದಾರೆ. ರಾಜವರ್ಧನ್ಗೆ ನಾಯಕಿಯಾಗಿ ರಚಿತಾ ರಾಮ್, ಆಶಿಕಾ ರಂಗನಾಥ್ ಮುಂತಾದವರನ್ನು ಕೇಳಿದೆವು. ಕೊನೆಗೆ ನೈನಾ ಗಂಗೂಲಿ ಆಯ್ಕೆಯಾದರು. 'ಪ್ರಯಣಂ' ನಿಶ್ಚಿತಾರ್ಥದಿಂದ ಮದುವೆ ಆಗುವವರೆಗಿನ ಕಥೆ. ಏಪ್ರಿಲ್ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ' ಎನ್ನುತ್ತಾರೆ.
ಇದುವರೆಗೂ ಆಕ್ಷನ್ ಚಿತ್ರಗಳನ್ನೇ ಮಾಡಿರುವ ರಾಜವರ್ಧನ್ ಈ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. 'ಪಾತ್ರ ಹೊಸತನದಿಂದ ಕೂಡಿದೆ. ಚಿತ್ರ ನೋಡುವ ಎಲ್ಲರಿಗೂ ಇಷ್ಟವಾಗಲಿದೆ' ಎನ್ನುತ್ತಾರೆ.
'ಪ್ರಣಯಂ' ಚಿತ್ರಕ್ಕೆ ಮನೋಮೂರ್ತಿ ಸಂಗೀತ ಮತ್ತು ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ರಾಜವರ್ಧನ್ ಮತ್ತು ನೈನಾ ಗಂಗೂಲಿ ಜತೆಗೆ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರಿದ್ದಾರೆ.