

ಕಾಸರಗೋಡು: ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಲಭಿಸಿದಾಗ ಬೌದ್ಧಿಕ ವಿಕಾಸಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ನಿರ್ಮಾತೃಗಳಾಗಬೇಕಾದರೆ, ಬದಲಾವಣೆ ತನ್ನಿಂದಲೇ ಆರಂಭಿಸಬೇಕಿದೆ. ಸವಾಲುಗಳನ್ನು ಎದುರಿಸುವುದರ ಜತೆಗೆ ನಾವು ತಿನ್ನುವ ಅನ್ನಕ್ಕೆ ಋಣಿಯಾಗಬೇಕಾದ ಅನಿವಾರ್ಯತೆಯಿದೆ ಎಂದು ವಿಶ್ರಾಂತ ಉಪನ್ಯಾಸಕ ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ 27ನೇ ರಾಜ್ಯ ಸಮ್ಮೇಳನದ ಸಂದರ್ಭ ಕಾಸರಗೋಡು ನಗರ ಸಭಾಂಗಣದಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಘಟನೆ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ.ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ್ ಕೆ., ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ., ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸುಕೇಶ್ ಕೆ., ಶರತ್ ಎಂ., ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಸತೀಶ್ ಉಪಸ್ಥಿತರಿದ್ದರು. ಜೀವನ್ ಕುಮಾರ್ ಸ್ವಾಗತಿಸಿ. ನವಪ್ರಸಾದ್ ವಂದಿಸಿದರು. ಚಂದ್ರಿಕಾ, ಜಯಪ್ರಶಾಂತ್ ಪಾಲೆಂಗ್ರಿ ನಿರೂಪಿಸಿದರು. 2024-25ರಲ್ಲಿ ನಿವೃತ್ತರಾಗುತ್ತಿರುವ ಶಿಕ್ಷಣಾಧಿಕಾರಿ, ಶಿಕ್ಷಕರು, ಮುಖ್ಯಶಿಕ್ಷಕರನ್ನು ಗೌರವಿಸಲಾಯಿತು.