

ನ್ಯೂಯಾರ್ಕ್: ಮಗಳ ಹುಟ್ಟುಹಬ್ಬದ ಉಡುಗೊರೆಯಾಗಿ ತಂದಂತಹ ಪ್ರಖ್ಯಾತ್ ಟ್ರಾಲ್ಸ್ ಗೊಂಬೆಯ ಗಿಫ್ಟ್ ಕವರ್ ತೆರೆದು ಗೊಂಬೆ ವೀಕ್ಷಿಸಿದ ಮಹಿಳೆಗೆ ಮುಜುಗರಪಡುವಂತಹ ಸನ್ನಿವೇಶವೊಂದು ಎದುರಾದಂತಹ ಘಟನೆ ದೂರದ ಅಮೆರಿಕದಲ್ಲಿ ನಡೆದಿದೆ.
ಹೆಸರೇಳಲು ಇಚ್ಛಿಸದ ಅಮೆರಿಕ ಮಹಿಳೆ ನಡೆದ ಘಟನಯನ್ನು ವಿವರಿಸಿದ್ದಾಳೆ. ಹಸ್ಬ್ರೊ ಕಂಪನಿಯ ಟ್ರಾಲ್ಸ್ ವರ್ಲ್ಡ್ ಟೂರ್ ಗಿಗಲ್ ಮತ್ತು ಸಿಂಗ್ ಪಾಪಿ ಡಾಲ್ ಅನ್ನು ತನ್ನ ಎರಡು ವರ್ಷದ ಮಗಳ ಬರ್ತಡೇಗಾಗಿ ಮಹಿಳೆ ಕೊಂಡು ತಂದಿದ್ದಳು. ಬರ್ತಡೇ ದಿನದಂದು ಗಿಫ್ಟ್ ಕವರ್ ತೆರೆದು ಗೊಂಬೆಯನ್ನು ವೀಕ್ಷಿಸಿದ ಆಕೆಗೆ ಶಾಕ್ ಆಗಿದೆ.
ಗೊಂಬೆಯ ಜನನಾಂಗದ ಸ್ಥಳದಲ್ಲಿನ ಬಟನ್ ಅನ್ನು ಒತ್ತಿದರೆ ಅದರಿಂದ ಸೆಕ್ಸುವಲ್ ಸೌಂಡ್ ಕೇಳಿ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾಳೆ. ಘಟನೆಯಿಂದ ಮುಜುಗರಕ್ಕೀಡಾಗಿರುವ ಮಹಿಳೆ ಅದನ್ನು ಖಂಡಿಸಿದ್ದಾಳೆ. ಅಲ್ಲದೆ, ಮತ್ತೊರ್ವ ಮಹಿಳೆ ಇದು ಶಿಶುಕಾಮವೆಂದು ಆರೋಪಿಸಿ, ಘಟನೆಯನ್ನು ಖಂಡಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. ಇದರ ಬೆನ್ನಲ್ಲೇ ಈ ರೀತಿಯ ಗೊಂಬೆಯನ್ನು ಸ್ಟೋರ್ನಿಂದ ತೆಗೆದುಹಾಕಲಾಗಿದ್ದು, ಮಾರಾಟವನ್ನು ನಿಲ್ಲಿಸಲಾಗಿದೆ.
ಜೆಸ್ಸಿಕಾ ಎಂಬ ಮಹಿಳೆ ಸುಮಾರು 253,283 ಸಹಿ ಸಂಗ್ರಹವುಳ್ಳ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಶಿಶುಕಾಮವು ಸರಿ ಎಂದು ಮಕ್ಕಳು ಚಿಂತಿಸುವುದರ ಮೇಲೆ ನಮ್ಮ ಸಮಾಜ ಷರತ್ತು ವಿಧಿಸಿದೆ. ಆದರೆ, ಈ ಟ್ರೋಲ್ಸ್ ವರ್ಲ್ಡ್ ಡಾಲ್ನ ಖಾಸಗಿ ಭಾಗದಲ್ಲಿನ ಬಟನ್ ಒತ್ತಿದರೆ, ಸೆಕ್ಸುವಲ್ ಸೌಂಡ್ ಬರುತ್ತದೆ. ಇದು ಮಕ್ಕಳ ಗೊಂಬೆಯಲ್ಲಿರುವುದು ಒಳ್ಳೆಯದಲ್ಲ. ನಮ್ಮ ಸ್ಟೋರ್ಗಳಲ್ಲಿ ಈ ರೀತಿಯ ಗೊಂಬೆಯನ್ನು ತೆಗೆಯಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಇದನ್ನು ಫನ್ಗಾಗಿ ಮಾಡಿರುವುದೇ ಆದರೆ, ಇದು ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತದೆ. ಇದು ಶಿಶುಕಾಮಕ್ಕೆ ಪ್ರಚೋದನೆ ನೀಡುತ್ತದೆ. ಇದು ಸರಿಯಿಲ್ಲ ಮತ್ತು ಫನ್ ಕೂಡ ಅಲ್ಲ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಇದು ದೀರ್ಘಕಾಲ ಪರಿಣಾಮ ಬೀರುತ್ತದೆ ಎಂದು ಜಸ್ಸಿಕಾ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.
ಇದೀಗ ಗೊಂಬೆ ಸೆಕ್ಸುವಲ್ ಸೌಂಡ್ ಮಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅದರ ಮಾರಾಟವನ್ನು ನಿಲ್ಲಿಸಿ, ಪಾಲಕರ ಕ್ಷಮೆಯಾಚಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದೊಂದು ಆಕಸ್ಮಿಕ ಎಂದು ಕಂಪನಿ ಹೇಳಿದೆ.
ಗೊಂಬೆಯು ಟ್ರೋಲ್ಸ್ ಸಿನಿಮಾದ ಸ್ಪೂರ್ತಿಯಿಂದ ತಯಾರಾಗಿದೆ. ಟ್ರೋಲ್ ಸಿನಿಮಾ 2016ರಲ್ಲಿ ಬಿಡುಗಡೆಯಾಯಿತು. ಇದರ ಮುಂದುವರಿದ ಭಾಗ ಟ್ರೋಲ್ಸ್ ವರ್ಲ್ಡ್ ಟೂರ್ ಈ ವರ್ಷದ ಮಾರ್ಚ್ನಲ್ಲಿ ಪ್ರೀಮಿಯರ್ ಆಯಿತು. ಈ ಚಿತ್ರದಲ್ಲಿ ಬರುವ ಪಪ್ಪಿ ಪಾತ್ರದ ಗೊಂಬೆ ಇದಾಗಿದೆ. (ಏಜೆನ್ಸೀಸ್) (ವಿಡಿಯೋ ಕೃಪೆ: ಡೈಲಿ ಮೇಲ್)