

ಬೀಜಿಂಗ್: ಇದ್ದಕ್ಕಿದ್ದಂತೆ ಕೆಟ್ಟು ನಿಂತು ಲಿಫ್ಟ್ನಲ್ಲಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಸಿಲುಕಿಕೊಂಡ ಚೀನಾದ ಅಮ್ಮ-ಮಗಳು ಪರಸ್ಪರ ತಮ್ಮ ಮೂತ್ರಗಳನ್ನೇ ಕುಡಿದು ಬದುಕಿರುವ ಘಟನೆ ನಿನ್ನೆಯಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಮ್ಮ-ಮಗಳ ಹೆಸರು ಬಹಿರಂಗಪಡಿಸಿಲ್ಲ. ಆದರೆ, ಅಮ್ಮನಿಗೆ 82 ಹಾಗೂ ಮಗಳಿಗೆ 64 ವರ್ಷ ಎಂದು ತಿಳಿದುಬಂದಿದೆ. ಚೀನಾದ ವಾಯುವ್ಯ ಪ್ರಾಂತ್ಯ ಶಾಂಕ್ಸಿ ನಿವಾಸಿಗಳಾದ ಇವರು ತಮ್ಮ ನಾಲ್ಕು ಅಂತಸ್ತಿನ ಕಟ್ಟಡದೊಳಗೆ ನಿರ್ಮಿಸಲಾದ ಲಿಫ್ಟ್ನಲ್ಲಿ ತಮ್ಮ ಎರಡನೇ ಮಹಡಿಗೆ ತೆರಳುವಾಗ ಲಿಫ್ಟ್ ಇದ್ದಕ್ಕಿಂದಂತೆ ಕೆಟ್ಟು ನಿಂತಿದೆ. ಗಾಬರಿಗೊಳಗಾದ ಅಮ್ಮ-ಮಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಲಿಫ್ಟ್ ಒಳಗೆ ಸಹಾಯಕ್ಕಾಗಿ ಯಾವುದೇ ವಸ್ತುವು ಸಹ ಇರಲಿಲ್ಲ. ಅಲ್ಲದೆ, ಫೋನ್ ತೆಗೆದುಕೊಂಡು ಹೋಗದೇ ಇದ್ದುದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ನೆರವಿಗಾಗಿ ಎಷ್ಟೇ ಕೂಗಾಡಿದರೂ ಸಹ ಪ್ರಯೋಜನವಾಗಲಿಲ್ಲ.
ಇದರ ನಡುವೆ ಬಾಯಾರಿಕೆಯನ್ನು ನೀಗಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಅಮ್ಮ-ಮಗಳಿಗೆ ಬೇರೆ ದಾರಿ ಕಾಣದೇ ಲಿಫ್ಟ್ ಒಳಗಡೆ ಬಿದ್ದಿದ್ದ ಲಿಕ್ವಿಡ್ ವೇಸ್ಟ್ ಅನ್ನು ಒಟ್ಟುಗೂಡಿಸಿ ಅದರ ಮೇಲೆ ಮೂತ್ರ ಮಾಡಿ ಪರಸ್ಪರ ಕುಡಿದು ದಣಿವು ನೀಗಿಸಿಕೊಂಡಿದ್ದಾರೆ.
ಇದರೊಂದಿಗೆ ಉಸಿರಾಟಕ್ಕಾಗಿ ಲಿಫ್ಟ್ ಒಳಗಡೆ ಇದ್ದ ಕಬ್ಬಿಣದ ತಂತಿಯನ್ನು ಎಳೆದು ಅದರ ಸಹಾಯದಿಂದ ಲಿಫ್ಟ್ ಬಾಗಿಲುಗಳನ್ನು ಸಡಿಲಗೊಳಿಸಿ ಸಣ್ಣ ರಂಧ್ರ ಮಾಡಿ ಅದರ ಮೂಲಕ ಉಸಿರಾಟ ನಡೆಸಿದ್ದಾರೆ. ಪರಸ್ಪರ ಮೂತ್ರ ಕುಡಿದು ಮೂರು ರಾತ್ರಿಗಳನ್ನು ಅಂದರೆ ಬರೋಬ್ಬರಿ 96 ಗಂಟೆಗಳನ್ನು ಲಿಫ್ಟ್ನಲ್ಲಿಯೇ ಕಳೆದಿದ್ದಾರೆ.
ನಾಲ್ಕನೇ ದಿನ ಲಿಫ್ಟ್ ಬಾಗಿಲು ಮೂಲಕ ಸಹಾಯಕ್ಕಾಗಿ ಕೂಗಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಲಿಫ್ಟ್ ಬಾಗಿಲನ್ನು ತೆರೆದು ಅಮ್ಮ-ಮಗಳನ್ನು ರಕ್ಷಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಂದಹಾಗೆ ಈ ಘಟನೆ ಅಮ್ಮ-ಮಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿರುವ ವೈದ್ಯರು ಮೂತ್ರ ಕುಡಿಯದೇ ಇದ್ದಿದ್ದರೆ, ಇಬ್ಬರು ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)