

ಹೈದರಾಬಾದ್: ಇಲ್ಲಿನ ಮಸೀದಿಯೊಂದು ಈ ಕರೊನಾ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿ ಬದಲಾಗಿದೆ. ಅಷ್ಟೇ ಅಲ್ಲ ಎಲ್ಲ ಧರ್ಮದ ಬಡವರಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದೆ.
ಆಸ್ಪತ್ರೆಯಾಗಿ ಬದಲಾದ ಈ ಮಸೀದಿಯಲ್ಲಿ ಲ್ಯಾಬೋರೇಟರಿ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರೊಂದಿಗೆ ಇಲ್ಲಿ ಇನ್ನುಮುಂದೆ 10 ವರ್ಷದವರೆಗಿನ ಮಕ್ಕಳಿಗೆ ಮಧ್ಯಾಹ್ನದ ಊಟವನ್ನೂ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅದರಲ್ಲೂ, ಈ ಮಸೀದಿ ಇರುವ ಸ್ಥಳವಾದ ರಾಜೇಂದ್ರ ನಗರ ಮಂಡಲದ ಸುಮಾರು 31 ಸ್ಲಮ್ಗಳಲ್ಲಿರುವ ಜನರಿಗೆ ಉಚಿತ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಗುವುದು. ಅದರಲ್ಲೂ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು. ಅಲ್ಲಿರುವ ಗರ್ಭಿಣಿಯರಿಗೆ ವೈದ್ಯಕೀಯ ಸೇವೆ, ಡಯಟ್ ಸಲಹೆಗಳನ್ನು ನೀಡಿ, ಆದಷ್ಟು ಸಹಜ ಹೆರಿಗೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಯುಎಸ್ ಮೂಲದ ಸೀಡ್ ಫೌಂಡೇಶನ್ ಸಹಯೋಗದಲ್ಲಿ ಹೈದರಾಬಾದ್ನ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಎಂಬ ಎನ್ಜಿಒ ಈ ಕ್ಲಿನಿಕ್ನ್ನು ಶುರು ಮಾಡುತ್ತಿದೆ.
ಹಾಗೇ ಈ ಕ್ಲಿನಿಕ್ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತದೆ. ಜನರಲ್ ಫಿಸಿಷಿಯನ್, ಮಕ್ಕಳ ತಜ್ಞರು, ಡೆಂಟಿಸ್ಟ್, ಸ್ತ್ರೀರೋಗ ತಜ್ಞರು, ನರ್ಸ್ಗಳು, ಡಯೆಟಿಷಿಯನ್ಸ್ಗಳೆಲ್ಲರೂ ಮಹಿಳೆಯರೇ ಆಗುತ್ತಾರೆ. ಹಾಗೇ ಇಲ್ಲಿ ಕೊವಿಡ್-19ಗೆ ಸಂಬಂಧಪಟ್ಟ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸಲಾಗುತ್ತದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)