

ನವದೆಹಲಿ: ಅಕ್ಟೋಬರ್-ನವೆಂಬರ್ನಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 20ಕ್ಕೂ ಅಧಿಕ ಕ್ರೀಡಾಪಟುಗಳು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಇದು ದೇಶದ ಕ್ರೀಡಾಕೂಟವೊಂದರಲ್ಲಿ ಗರಿಷ್ಠ ಕ್ರೀಡಾಪಟುಗಳು ಡೋಪಿಂಗ್ನಲ್ಲಿ ಸಿಕ್ಕಿಬಿದ್ದ ದೃಷ್ಟಾಂತವಾಗಿದೆ.
ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ಇವರೆಲ್ಲರನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈ ಪೈಕಿ ಕೆಲ ಪದಕ ವಿಜೇತರು ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳೂ ಇದ್ದಾರೆ. ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 9 ಕ್ರೀಡಾಪಟುಗಳು ಸಿಕ್ಕಿಬಿದ್ದಿದ್ದರೆ, ವೇಟ್ಲಿಫ್ಟಿಂಗ್ನ 7 ಸ್ಪರ್ಧಿಗಳಿದ್ದಾರೆ.
ಪ್ರಮುಖ ವೇಟ್ಲಿಫ್ಟರ್ ಎನಿಸಿದ್ದ ವಂದನಾ ಗುಪ್ತಾ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಹೆಚ್ಚು ಆಘಾತಕಾರಿ ಎನಿಸಿದೆ. ಉತ್ತರ ಪ್ರದೇಶದ ವಂದನಾ ಗೋವಾದಲ್ಲಿ ಮಹಿಳೆಯರ 76 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
2015ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 16 ಕ್ರೀಡಾಪಟುಗಳು ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಹಿಂದಿನ ಗರಿಷ್ಠವಾಗಿದ್ದರೆ, 2022ರಲ್ಲಿ ಗುಜರಾತ್ನಲ್ಲಿ 10 ಕ್ರೀಡಾಪಟುಗಳು ಸಿಕ್ಕಿಬಿದ್ದಿದ್ದರು.