ಮೂಡಲಪಾಳ್ಯ ಹೆರಿಗೆ ಆಸ್ಪತ್ರೆ ಸೀಲ್​ಡೌನ್

carona logo
Published on

ಬೆಂಗಳೂರು: ನಗರದಲ್ಲಿ ಭಾನುವಾರ ಮೃತಪಟ್ಟ ಕರೋನಾ ಸೋಂಕಿತ ಮಹಿಳೆ ಮೂಡಲಪಾಳ್ಯದ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಹಿನ್ನೆಲೆಯಲ್ಲಿ ಆ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ.

ಹಂಪಿನಗರದ ನಿವಾಸಿ ಯಾಗಿದ್ದ 45 ವರ್ಷದ ಮಹಿಳೆಗೆ ಕರೊನಾ ಸೋಂಕು ದೃಢವಾಗುವ ಮೊದಲು ಏ.22 ಹಾಗೂ ಏ.23 ರಂದು ರಕ್ತಸ್ರಾವ ಹಿನ್ನೆಲೆಯಲ್ಲಿ ಮೂಡಲಪಾಳ್ಯದ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಏ.22 ರಂದು ಹೆರಿಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಮಹಿಳೆಯನ್ನು ಮನೆಗೆ ಕಳುಹಿಸಿದ್ದರು. ಮರುದಿನ ಮರುದಿನ ಆಕೆ ಪುನಃ ಆಸ್ಪತ್ರೆಗೆ ಭೇಟಿ ನೀಡಿದಾಗ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ವೈದ್ಯರು ಹೆಚ್ಚಿನ ತಪಾಸಣೆಗೆ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಾಗಲು ಶಿಫಾರಸು ಮಾಡಿದ್ದರು. ಸೋಂಕು ದೃಢಪಟ್ಟ ಕಾರಣ ಹೆರಿಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

8 ಸಿಬ್ಬಂದಿಗೆ ಕ್ವಾರಂಟೈನ್: ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು ಮತ್ತು ಆರು ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿದ್ದ 12 ಮಂದಿ ಒಳರೋಗಿಗಳನ್ನು ರಾಜಾಜಿನಗರ ಮತ್ತು ಕಾವೇರಿಪುರದ ಹೆರಿಗೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಮೂಡಲಪಾಳ್ಯ ಆಸ್ಪತ್ರೆಗೆ ಭೇಟಿ ನೀಡುವ ಹೊರರೋಗಿಗಳನ್ನು ಕಾವೇರಿಪುರ, ರಾಜಾಜಿನಗರ ಹಾಗೂ ಮಾಗಡಿ ರಸ್ತೆಯ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಲಾಗುತ್ತಿದ್ದು, ಹತ್ತಿರದ ಆಸ್ಪತ್ರೆಗಳ ದೂರವಾಣಿ ಸಂಖ್ಯೆ ಪ್ರಕಟಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ನಿರ್ಮಲಾ ಬುಗ್ಗಿ ತಿಳಿಸಿದ್ದಾರೆ.

ಒಂದು ವಾರದವರೆಗೆ ಬಂದ್: ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಗಳನ್ನು 3 ದಿನ ಸೀಲ್ ಮಾಡಲಾಗುತ್ತದೆ. ಆಸ್ಪತ್ರೆಗೆ ಭಾನುವಾರ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ. 3 ದಿನದ ನಂತರ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತೊಮ್ಮೆ ದ್ರಾವಣ ಸಿಂಪಡಿಸಲಾಗುತ್ತದೆ. ಒಂದು ವಾರದ ನಂತರ ಆಸ್ಪತ್ರೆ ಎಂದಿನಂತೆ ಕಾರ್ಯಾರಂಭ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net