ಸಂಸತ್ತಿನ ಮುಂಗಾರು ಅಧಿವೇಶನವು ಆಪರೇಷನ್ ಸಿಂಧೂರದಲ್ಲಿ ಸೈನಿಕರ ಗೆಲುವನ್ನು ಆಚರಿಸಲಿದೆ: ಪ್ರಧಾನಿ ಮೋದಿ | Monsoon session

Monsoon session
Published on

Monsoon session : ಸಂಸತ್ತಿನ ಮುಂಗಾರು ಅಧಿವೇಶನವು ಆಪರೇಷನ್ ಸಿಂಧೂರದಲ್ಲಿನ ಸೈನಿಕರ ವಿಜಯವನ್ನು ಆಚರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೆ, ಇಡೀ ಜಗತ್ತು ಭಾರತದ ಶಕ್ತಿಯನ್ನು ನೋಡಿದೆ ಮತ್ತು ಈ ವಿಷಯದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕೆಂದು ಮೋದಿ ಕರೆ ನೀಡಿದರು.

ಮುಂಗಾರು ಅಧಿವೇಶನದ ಆರಂಭಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಭಾರತ ಬಾಹ್ಯಾಕಾಶ ನಿಲ್ದಾಣಕ್ಕೆ ಕಾಲಿಡುವುದರಿಂದ ಹಿಡಿದು 2026ರ ವೇಳೆಗೆ "ನಕ್ಸಲಿಸಂ ಮುಕ್ತ" ದೇಶವನ್ನು ನಿರ್ಮಿಸುವ ಸರ್ಕಾರದ ಸಂಕಲ್ಪದವರೆಗೆ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಆದಾಗ್ಯೂ, ಸಂಸತ್ತಿನ ಕಲಾಪಗಳು ಆರಂಭವಾಗುತ್ತಿದ್ದಂತೆ ಆಪರೇಷನ್​ ಸಿಂಧೂರ ಸಂಭ್ರಮಕ್ಕೆ ಪಟಾಕಿ ಸಿಡಿಯಿತು. ಇದೇ ವೇಳೆ ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಬಗ್ಗೆ ಚರ್ಚೆ ಮಾಡುವಂತೆ ಪ್ರತಿಪಕ್ಷಗಳು ಒತ್ತಾಯಿಸಿದವು. ಈ ಘೋಷಣೆಗಳು ಲೋಕಸಭೆಯಲ್ಲಿ ಸ್ವಲ್ಪ ಸಮಯದವರೆಗೆ ಕಲಾಪವನ್ನು ಮುಂದೂಡಲು ಕಾರಣವಾಯಿತು.

ಆಪರೇಷನ್​ ಸಿಂಧೂರ ಕಾರ್ಯಾಚರಣೆಯು ಶೇ 100 ರಷ್ಟು ಗುರಿ ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದವು. ಭಯೋತ್ಪಾದಕರ ಮುಖ್ಯಸ್ಥರ ಮನೆಗಳನ್ನು 22 ನಿಮಿಷಗಳಲ್ಲಿ ನೆಲಸಮ ಮಾಡಲಾಯಿತು ಎಂದರು.

ನಕ್ಸಲಿಸಂ ಅನ್ನು ಕೊನೆಗೊಳಿಸುವ ಸರ್ಕಾರದ ಸಂಕಲ್ಪದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಇಂದು ಅನೇಕ ಜಿಲ್ಲೆಗಳು ನಕ್ಸಲಿಸಂನಿಂದ ಮುಕ್ತವಾಗಿವೆ. ಕೆಂಪು ಕಾರಿಡಾರ್‌ಗಳು ಹಸಿರು ಬೆಳವಣಿಗೆಯ ವಲಯಗಳಾಗಿ ರೂಪಾಂತರಗೊಳ್ಳುತ್ತಿವೆ ಎಂದರು.

ಭಾರತವು ಈಗ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, ದೇಶವನ್ನು "ದುರ್ಬಲ ಐದು" ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದ ದಿನಗಳು ಕಳೆದುಹೋಗಿವೆ ಎಂದರು. 2014 ಕ್ಕಿಂತ ಮೊದಲು ಹಣದುಬ್ಬರ ದರ ಎರಡಂಕಿಗಳಲ್ಲಿದ್ದ ಸಮಯವಿತ್ತು. ಇಂದು, ದರವು ಸುಮಾರು 2% ಕ್ಕೆ ಇಳಿದಿದ್ದು, ಇದು ಸಾಮಾನ್ಯ ಜನರಿಗೆ ಸಮಾಧಾನಕರವಾಗಿದೆ ಎಂದು ಹೇಳಿದರು.

ಇನ್ನು ಅಧಿವೇಶನದಲ್ಲಿ ವಿಪಕ್ಷಗಳು ತೀವ್ರವಾಗಿ ಧ್ವನಿ ಎತ್ತುವ ವಿಷಯಗಳಲ್ಲಿ ಅಹಮದಾಬಾದ್‌ನಲ್ಲಿ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಅಪಘಾತ ಮತ್ತು ವಾಯುಯಾನ ಸುರಕ್ಷತೆಯ ವಿಷಯವೂ ಸೇರಿವೆ.

ಇದೇ ವೇಳೆ ವಿಪಕ್ಷಗಳಿಂದ ಸಹಕಾರ ಕೋರಿದ ಕೇಂದ್ರ ಸಚಿವ ಕಿರಣ್ ರಿಜಿಜು, ಸರ್ಕಾರವು ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಲು ಮುಕ್ತವಾಗಿದೆ ಎಂದು ಹೇಳಿದರು. ಅಲ್ಲದೆ, ಯಾವುದೇ ವಿಷಯದಿಂದ ನಾವು ದೂರ ಸರಿಯುವುದಿಲ್ಲ ಎಂದರು. ಆದರೆ, ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿದರು.

ಅಂದಹಾಗೆ, 32 ದಿನಗಳ ಅವಧಿಯಲ್ಲಿ ಒಟ್ಟು 21 ಅಧಿವೇಶನಗಳು ನಡೆಯಲಿದ್ದು, ಆಗಸ್ಟ್ 21 ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net