

Pakistan: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಆತಿಥೇಯ ಪಾಕಿಸ್ತಾನದ ಹೊರಬಿದ್ದಿರುವುದು ಎಲ್ಲರಿಗೂ ತಿಳಿದಿದೆ. ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸಿದ್ದ ಪಾಕಿಸ್ತಾನ ಸತತ ಎರಡು ಪಂದ್ಯಗಳನ್ನು ಸೋತು ಒಂದು ಪಂದ್ಯ ಬಾಕಿ ಇರುವಾಗಲೇ ಟೂರ್ನಿಯಿಂದ ನಿರ್ಗಮಿಸಿದೆ.
ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ಪಡೆ ಮೊದಲ ಪಂದ್ಯದಲ್ಲೇ ಕಿವೀಸ್ ವಿರುದ್ಧ 60 ರನ್ಗಳಿಂದ ಸೋಲುಂಡಿತು. ಇದಾದ ಬಳಿಕ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 6 ವಿಕೆಟ್ಗಳಿಂದ ಹೀನಾಯವಾಗಿ ಸೋಲುಂಡಿತು.
ಬ್ಯಾಕ್ ಟು ಬ್ಯಾಕ್ ಎರಡೂ ಪಂದ್ಯಗಳಲ್ಲಿ ಸೋಲುಂಡು ಗ್ರೂಪ್ ಹಂತದಲ್ಲಿಯೇ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿರುವುದನ್ನು ಆ ದೇಶದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಡೀ ಪಾಕಿಸ್ತಾನದ ಜನತೆ ತಮ್ಮ ತಂಡದ ಹೀನಾಯ ಪ್ರದರ್ಶನಕ್ಕೆ ಕೋಪಗೊಂಡಿದ್ದು, ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್ ಅವರು ರಿಜ್ವಾನ್ ಸೇನೆಯ ಮೇಲೆ ಟೀಕೆಗಳ ಸುರಿಮಳೆಗೈದಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಸರಿಯಾದ ಆಹಾರ ಪದ್ಧತಿಯನ್ನು ಸಹ ಅನುಸರಿಸಲಿಲ್ಲ ಎಂದು ಅಕ್ರಮ್ ಮಾಧ್ಯಮ ಸಂದರ್ಶನವೊಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಸರಿಯಾದ ಆಹಾರ ಕ್ರಮವನ್ನೂ ಅನುಸರಿಸುತ್ತಿಲ್ಲ. ಭಾರತದ ವಿರುದ್ಧದ ಪಂದ್ಯದಲ್ಲಿ ಮೊದಲ ಪಾನೀಯ ವಿರಾಮದ ಸಮಯದಲ್ಲಿ, ಆಟಗಾರರಿಗಾಗಿ ಬಾಳೆಹಣ್ಣುಗಳಿಂದ ತುಂಬಿದ ತಟ್ಟೆಯನ್ನು ನಾನು ನೋಡಿದೆ. ಮಂಗಗಳು ಸಹ ಅಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ. ಅವುಗಳಿಗೆ ಬಾಳೆಹಣ್ಣು ಪ್ರಮುಖ ಆಹಾರವಾಗಿದ್ದರೂ, ಅವು ಹೆಚ್ಚು ತಿನ್ನುವುದಿಲ್ಲ. ಆದರೆ, ನಮ್ಮ ಆಟಗಾರರು ಮಂಗಗಳಿಗಿಂತ ಹೆಚ್ಚು ತಿನ್ನುತ್ತಿದ್ದಾರೆ. ಈ ಕಳಪೆ ಪ್ರದರ್ಶನಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು. ಕ್ರಿಕೆಟ್ ಮುಂದುವರಿಯುತ್ತಿದ್ದರೂ, ನಮ್ಮ ತಂಡ ಮಾತ್ರ ಇನ್ನೂ ಹಿಂದಿನಂತೆಯೇ ಆಡುತ್ತಿದೆ ಎಂದು ಅಕ್ರಮ್ ಅಸಮಾಧಾನ ಹೊರಹಾಕಿದರು.
ಪಾಕ್ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ನಿರ್ಭೀತ ಕ್ರಿಕೆಟಿಗರು ಮತ್ತು ಯುವ ಆಟಗಾರರನ್ನು ತಂಡಕ್ಕೆ ಕರೆ ತನ್ನಿ. ನೀವು ಪ್ರಸ್ತುತ ತಂಡದಲ್ಲಿ ಖಂಡಿತವಾಗಿಯೂ ಐದರಿಂದ ಆರು ಆಟಗಾರರ ಬದಲಾವಣೆ ಮಾಡಬೇಕಾಗಿದೆ. ಈಗಾಗಲೇ ನಿಮ್ಮ ತಪ್ಪುಗಳನ್ನು ತಿಳಿದುಕೊಂಡಿದ್ದೀರಿ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್-2026 ಗಾಗಿ ತಂಡವನ್ನು ಮತ್ತೆ ಸಿದ್ಧಪಡಿಸಿ ಎಂದು ವಾಸಿಂ ಅಕ್ರಮ್ ಪಿಸಿಬಿಗೆ ಸಲಹೆ ನೀಡಿದ್ದಾರೆ.
ಅಂದಹಾಗೆ ಫೆಬ್ರವರಿ 27ರಂದು ಪಾಕಿಸ್ತಾನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈಗಾಗಲೇ ಪಾಕ್, ಟೂರ್ನಿಯಿಂದ ಹೊರಬಿದ್ದಿದೆ. (ಏಜೆನ್ಸೀಸ್)