

ಪುಣೆ : ಸೈಬರ್ ಖದೀಮರು ಯಾವ ರೂಪದಲ್ಲಿ ಯಾವ ಕಡೆಯಿಂದ ಬೇಕಿದ್ದರೂ ನುಸುಳಿಬಂದು ವಂಚಿಸುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ. ಅವಿವಾಹಿತ ವೈದ್ಯೆಯೊಬ್ಬರನ್ನು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಪರಿಚಯ ಮಾಡಿಕೊಂಡು ಹಣ ಲಪಟಾಯಿಸಿರುವ ಪ್ರಕರಣ ವರದಿಯಾಗಿದೆ.
ಪುಣೆಯ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾದ 36 ವರ್ಷದ ಮಹಿಳೆಯೊಬ್ಬರು ವಧುವರರ ಸಂಪರ್ಕ ವೇದಿಕೆಯಾದ ವೆಬ್ಸೈಟ್ ಒಂದರಲ್ಲಿ ಸದಸ್ಯರಾಗಿದ್ದರು. ಮಾರ್ಚ್ ಕೊನೆಯ ವಾರದಲ್ಲಿ, ವ್ಯಕ್ತಿಯೊಬ್ಬ, ವಿದೇಶದಲ್ಲಿ ನೆಲೆಸಿರುವ ಭಾರತೀಯ ವೈದ್ಯನೆಂಬಂತೆ ಆಕೆಯನ್ನು ಆನ್ಲೈನ್ನಲ್ಲಿ ಸಂಪರ್ಕಿಸಿದ. ಆರಂಭಿಕವಾಗಿ ಅದೇ ವೇದಿಕೆಯ ಮೂಲಕ ಮಾತನಾಡುತ್ತಿದ್ದ ಅವರು ನಂತರ ತಮ್ಮ ಫೋನ್ ನಂಬರ್ಗಳನ್ನು ಬದಲಾಯಿಸಿಕೊಂಡರು.
ಮಾತುಕತೆ ಮುಂದುವರೆದಂತೆ ಕೆಲವು ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವ ವಂಚಕನು ಮಹಿಳೆಯ ತಾಯಿಯ ಜನ್ಮದಿನಕ್ಕೆ ತಾನೊಂದು ಉಡುಗೊರೆ ಕಳುಹಿಸಿರುವುದಾಗಿ ಹೇಳಿದ್ದಾನೆ. ನಂತರ ಆ ಉಡುಗೊರೆಯ ಕಸ್ಟಮ್ ಕ್ಲಿಯರೆನ್ಸ್ಗಾಗಿ 36,000 ರೂಪಾಯಿ ಅಗತ್ಯವಿದೆ ಎಂದು ವರ್ಗಾಯಿಸಿಕೊಂಡಿದ್ದಾನೆ. ಆದರೆ, ಅದೇ ನೆಪದಲ್ಲಿ ಮತ್ತೆ 90,000 ರೂ.ಗಳ ಬೇಡಿಕೆ ಇಟ್ಟಾಗ ಮಹಿಳೆಗೆ ಅನುಮಾನ ಬಂದು ಪ್ರಶ್ನೆಗಳನ್ನು ಕೇಳಿದ್ದಾರೆ. ತದನಂತರ ನಕಲಿ ಪ್ರೊಫೈಲ್ನ ಹಿಂದಿನ ಖದೀಮ, ಆಕೆಯ ಕಾಲ್ಗಳಿಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದಾನೆ.
ನೊಂದ ಮಹಿಳೆಯು ಪುಣೆ ನಗರದ ಕೋಂಧ್ವ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳಡಿ ಎಫ್.ಐ.ಆರ್. ದಾಖಲಿಸಲಾಗಿದ್ದು, ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸಿರುವ ಸೈಬರ್ ಖದೀಮನ ಪತ್ತೆ ಕಾರ್ಯ ಆರಂಭವಾಗಿದೆ. ಕೆಲವು ಶಂಕಿತರ ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ಶಬ್ಬೀರ್ ಸಯ್ಯೆದ್ ಹೇಳಿದ್ದಾರೆ. (ಏಜೆನ್ಸೀಸ್)