Mohammed Siraj : ಅಡಿಲೇಡ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸೀಸ್ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ನಡೆದ ವಾಗ್ವಾದದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದ ಕೆಲ ದಿನಗಳಿಂದ ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ಸಿರಾಜ್ರನ್ನು ಟೀಕಿಸಿದರೆ, ಇನ್ನು ಕೆಲವರು ಹೆಡ್ ವಿರುದ್ಧ ದೂರಿದ್ದಾರೆ. ಆದರೆ, ಇಬ್ಬರ ವಿರುದ್ಧವೂ ಐಸಿಸಿ ಕ್ರಮ ಕೈಗೊಂಡಿದೆ. ಹೆಡ್‌ಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದರೆ, ಸಿರಾಜ್‌ಗೆ ಡಿಮೆರಿಟ್ ಪಾಯಿಂಟ್ ಜತೆಗೆ 20 ಪ್ರತಿಶತ ಪಂದ್ಯ ಶುಲ್ಕ ಕಡಿತಗೊಳಿಸಲಾಗಿದೆ.
ಸಿರಾಜ್ ಮತ್ತು ಹೆಡ್ ನಡುವಿನ ಜಗಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗಳ ಹೊರತಾಗಿಯೂ, ಉಭಯ ಆಟಗಾರರು ಪಂದ್ಯದ ನಡುವೆ ಅಪ್ಪಿಕೊಂಡು ಕೈಕುಲುಕುವ ಮೂಲಕ ರಾಜಿ ಮಾಡಿಕೊಂಡರು. ಹೆಡ್ ಅವರು ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಿದ್ದೇನೆ ಎಂದು ಸಿರಾಜ್ ಬಹಿರಂಗವಾಗಿಯೇ ಒಪ್ಪಿಕೊಂಡರು. ಈ ವಿವಾದದಲ್ಲಿ ಸಿರಾಜ್ ಅವರ ತಪ್ಪನ್ನು ಹೊರತುಪಡಿಸಿದರೆ, ಮೈದಾನದಲ್ಲಿ ಅವರ ನಡವಳಿಕೆ ಉತ್ತಮವಾಗಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಿರಾಜ್ ಅವರನ್ನು ಟೀಕಿಸಿದವರ ಸಾಲಿಗೆ ಇದೀಗ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಸೇರಿಕೊಂಡಿದ್ದಾರೆ.
ಹೆಡ್ ಕಡೆಗೆ ಸಿರಾಜ್ ತೋರಿಸಿದ ವರ್ತನೆ “ಹುಚ್ಚು” ವರ್ತನೆ ಮತ್ತು ಹೆಡ್ ಜತೆ ವಾಗ್ವಾದಕ್ಕಿಳಿದಿದ್ದು ಅನ್ಯಾಯ ಎಂದು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶ್ರೀಕಾಂತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೇ ಸಿರಾಜ್… ನಿಮ್ಮ ಬೌಲಿಂಗ್ ಅನ್ನು ಹೆಡ್ ನಿರ್ದಯವಾಗಿ ಎದುರಿಸಿದರು. ನಿಮ್ಮ ಬೌಲಿಂಗ್‌ನಲ್ಲಿ ಎಲ್ಲ ಸಮಯದಲ್ಲೂ ಹೆಡ್ ಚೆನ್ನಾಗಿ ಆಡುತ್ತಿದ್ದರು. ನಿಮ್ಮ ಬೌಲಿಂಗ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸುಲಭವಾಗಿ ಹೊಡೆದರು. ಇದನ್ನು ಹೇಳುವುದಲ್ಲಿ ನಾಚಿಕೆ ಇಲ್ಲ. ಅವನನ್ನು ನೀವು ಕಳುಹಿಸುತ್ತೀರಾ? ನಿನಗೆ ನಿಜವಾಗಲೂ ಬುದ್ಧಿ ಇದೆಯಾ? ಅಕ್ಷರಶಃ ಮೈದಾನದಲ್ಲಿ ನೀನು ಹುಚ್ಚನಂತೆ ವರ್ತಿಸಿದ್ದೀಯ. ಇದು ನಿಜವಾಗಿಯೂ ಸ್ಲೆಡ್ಜಿಂಗ್ ಆಗಿದೆಯೇ? ಇದು ಕೇವಲ ಹುಚ್ಚುತನ ಎಂದು ಸಿರಾಜ್ ವಿರುದ್ಧ ಶ್ರೀಕಾಂತ್ ಹರಿಹಾಯ್ದರು.
ಭಾರತೀಯ ಬೌಲರ್‌ಗಳನ್ನು ಅದರಲ್ಲೂ ಅಶ್ವಿನ್ ಅವರಂತಹ ಅನುಭವಿಯನ್ನು ನಿರ್ಭೀತವಾಗಿ ಎದರಿಸಿದ್ದಕ್ಕೆ ಹೆಡ್ ಅವರನ್ನು ಶ್ರೀಕಾಂತ್ ಕೊಂಡಾಡಿದರು. ಓರ್ವ ಬ್ಯಾಟರ್ 140 ರನ್ ಗಳಿಸಿದಾಗ ಅವನಿಗೆ ನೀವು ಗೌರವ ನೀಡಬೇಕು. ಅವರ ಆಟವನ್ನು ಪ್ರಶಂಸಿಸಬೇಕು. ಆದರೆ, ನೀವು ಅವರನ್ನು ಅಗೌರವದ ರೀತಿಯಲ್ಲಿ ಕಳುಹಿಸಲು ಬಯಸುವಿರಾ? ನೀವು ಡಕೌಟ್ ಅಥವಾ ಹತ್ತು ರನ್‌ಗಳಿಗೆ ಹೆಡ್ ಅವರನ್ನು ಔಟ್ ಮಾಡಿದ್ದರೆ ಅದು ಬೇರೆ ವಿಷಯ. ಆದರೆ, ನಿಮ್ಮ ಬೌಲಿಂಗ್‌ನಲ್ಲಿ ಅವರು ಚೆನ್ನಾಗಿ ಆಡಿದ್ದಾರೆ ಎಂದು ಶ್ರೀಕಾಂತ್ ಹೇಳಿದರು.
ನೀನು ಹೆಡ್ ಅವರ ವಿಕೆಟ್ ಕಿತ್ತುಕೊಂಡಿದ್ದಕ್ಕೆ ತುಂಬಾ ಖುಷಿಯಾಗಿದ್ದೀಯ. ಆದರೆ, ಹೆಡ್ ನಿಮ್ಮ ಬೌಲಿಂಗ್‌ನಲ್ಲಿ ಎಲ್ಲ ಸಮಯದಲ್ಲೂ ಆಡಿದ್ದನ್ನು ಹೇಗೆ ಮರೆಯಲಿ? ಹೆಡ್ ಸ್ಫೋಟಗೊಂಡಾಗ ಭಾರತದ ಯಾವ ಬೌಲರ್‌ಗೂ ಉತ್ತರವಿರಲಿಲ್ಲ. ಮನಸೋ ಇಚ್ಛೆ ಸಿಕ್ಸರ್ ಬಾರಿಸಿದರು. ಅವರು ಅಶ್ವಿನ್ ಅವರನ್ನು ನಿಜವಾದ ಸ್ಪಿನ್ನರ್ ಎಂತಲೂ ಗುರುತಿಸಲಿಲ್ಲ. ಅವರು ವಿಕೆಟ್‌ಗಳನ್ನು ಬಿಟ್ಟು ಮುಂದೆ ಬಂದು ಸುಲಭವಾಗಿ ಸಿಕ್ಸರ್‌ಗಳನ್ನು ಬಾರಿಸಿದರು ಎಂದು ಹೆಡ್ ಅವರನ್ನು ಶ್ರೀಕಾಂತ್ ಗುಣಗಾನ ಮಾಡಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಟೀಮ್ ಇಂಡಿಯಾ ಆಸಿಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಪರ್ತ್ನಲ್ಲಿ ನಡೆದ ಟೆಸ್ಟ್‌ನಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ, ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋಲುಂಡಿತು. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-1ರ ಮೂಲಕ ಸಮಬಲ ಕಾಯ್ದುಕೊಂಡಿದೆ. ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳು ಭಾರತದ ಪಾಲಿಗೆ ನಿರ್ಣಾಯಕವಾಗಿವೆ. (ಏಜೆನ್ಸೀಸ್)
ಮೊಹಮ್ಮದ್ ಸಿರಾಜ್ ಓರ್ವ… ವಿವಾದದ ನಡುವೆಯೇ ಆಸಿಸ್ ಸ್ಟಾರ್ ವೇಗಿಯಿಂದ ಅಚ್ಚರಿ ಹೇಳಿಕೆ! Mohammed Siraj
ಹೊಟ್ಟೆಯ ಬೊಜ್ಜು ಕರಗಿಸಿ ತೂಕ ಇಳಿಸಬೇಕೇ? ಮಧ್ಯಾಹ್ನದ ಊಟಕ್ಕೆ ಅನ್ನ ಬದಲು ಇವುಗಳನ್ನು ತಿನ್ನಿ… Weight loss