ಶಮಿ ಯಶಸ್ಸೇ ನನಗೆ ಬಂಡವಾಳ! ಭಾರತಕ್ಕೆ ಒಳ್ಳೆಯದಾಗಲಿ ಆತನಿಗಲ್ಲ, ಮಾಜಿ ಪತ್ನಿಯ ಸ್ಫೋಟಕ ಹೇಳಿಕೆ

Mohammad Shami
Published on

ನವದೆಹಲಿ: ಪ್ರಸಕ್ತ ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ವೇಗಿ ಮೊಹಮ್ಮದ್​ ಶಮಿ, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯಗೊಂಡ ಬಳಿಕ ಆಡುವ ಹನ್ನೊಂದರ ಬಳಗ ಸೇರಿಕೊಂಡರು. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೌಲಿಂಗ್​ನಲ್ಲಿ​ ಮಿಂಚಿರುವ ಶಮಿ ಇದೀಗ ತಂಡದ ನಿರ್ಣಾಯಕ ಬೌಲರ್​ ಎನಿಸಿಕೊಂಡಿದ್ದಾರೆ. ಕೇವಲ 4 ಪಂದ್ಯಗಳಲ್ಲಿ 14 ವಿಕೆಟ್​ ಪಡೆದು ಎಲ್ಲರ ಗಮನ ಸೆಳೆದಿರುವ ಶಮಿ, 4ರಲ್ಲಿ ಒಂದು ಪಂದ್ಯದಲ್ಲಿ 5 ವಿಕೆಟ್​ ಉರುಳಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಕ್ರೀಡಾಂಗಣದಲ್ಲಿ ಯಶಸ್ಸಿನ ಬೆನ್ನೇರಿರುವ ಶಮಿ, ವೈವಾಹಿಕ ಜೀವನದಲ್ಲಿ ತಮ್ಮ ಮಾಜಿ ಪತ್ನಿ ಹಸಿನಾ ಜಹಾನ್ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ.​ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿರುವ ಜಹಾನ್, ಶಮಿಯಿಂದ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ತಮ್ಮ ಮಾಜಿ ಪತಿಯ ವಿಶ್ವಕಪ್​ ಯಶಸ್ಸಿನ ಬಗ್ಗೆ ಜಹಾನ್​, ಆಘಾತಕಾರಿಯಾಗಿ ಮಾತನಾಡಿದ್ದಾರೆ.

ಅದೇನೆ ಇರಲಿ ಶಮಿ ಚೆನ್ನಾಗಿ ಆಡಿದರೆ, ಭಾರತ ತಂಡದಲ್ಲಿ ಉಳಿದರೆ ಮತ್ತು ಚೆನ್ನಾಗಿ ಸಂಪಾದನೆ ಮಾಡಿದರೆ, ಅದು ನನ್ನ ಮತ್ತು ನನ್ನ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿ ಇರಿಸುತ್ತದೆ. ನಾನು ಭಾರತ ತಂಡಕ್ಕೆ ಶುಭ ಕೋರುತ್ತೇನೆ ಹೊರತು ಶಮಿಗೆ ಒಳ್ಳೆಯದಾಗಲಿ ಎಂದು ಬಯಸುವುದಿಲ್ಲ. ಆತ ಚೆನ್ನಾಗಿ ಆಡಿದ್ದಷ್ಟೂ ನನಗೆ ಲಾಭ, ಆತನ ಯಶಸ್ಸೇ ನನಗೆ ಬಂಡವಾಳ ಎನ್ನುವ ಅರ್ಥದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಜಹಾನ್​ ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಜಹಾನ್​ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ. ಆದರೆ, ಈವರೆಗೂ ಇಬ್ಬರು ಡಿವೋರ್ಸ್​ ತೆಗೆದುಕೊಂಡಿಲ್ಲ ಎಂಬುದು ವಿಶೇಷ.

ಶಮಿ ವಿರುದ್ಧ ಜಹಾನ್​, ಜಾಧವಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್​ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್​, ಮಾಜಿ ಪತಿಯ ಕಾಲ್​ ರೆಕಾರ್ಡಿಂಗ್ಸ್​ ಸಹ ಶೇರ್​ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್​ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್​ ಬೌಲರ್​ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net