

ನವದೆಹಲಿ: ಪ್ರಕೃತಿ ವಿಕೋಪಕ್ಕೆ ಅಪಾರ ಹಾನಿಯಾದ ಕೇರಳದ ವಯನಾಡು ಜಿಲ್ಲೆಯ ಚುರಲ್ಮಲಾ ಮತ್ತು ಮುಂಡಕ್ಕ ಗ್ರಾಮಗಳಿಗೆ ಆ.10(ಶನಿವಾರ) ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ಪ್ರಧಾನಿ ಭೇಟಿ ಬಳಿಕ ಅವರು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಕಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಯನಾಡು ವಿಷಯದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್, ವಯನಾಡು ಜನತೆಗೆ ಪರಿಹಾರ ಘೋಷಿಸಬೇಕು ಎಂದು ಮೋದಿ ಸರ್ಕಾರವನ್ನು ಒತ್ತಾಯಿಸಿದರು. ದುರಂತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು. ಈ ದುರಂತದಲ್ಲಿ ಹಲವು ಕುಟುಂಬಗಳು ನಲುಗಿ ಹೋಗಿದೆ. ಕೆಲವು ಸ್ಥಳಗಳಲ್ಲಿ, ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಉಳಿದಿದ್ದಾರೆ. ಮನೆಯಲ್ಲಿ ಹಿರಿಯರಿಲ್ಲ, ಮಕ್ಕಳ ಪೈಕಿ ಒಬ್ಬರೇ ಉಳಿದಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ರಾಹುಲ್ ಗಾಂಧಿ ವಿವರಿಸಿದರು.
ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವಯನಾಡು ಜಿಲ್ಲೆಗೆ ಭೇಟಿ ನೀಡಿದ್ದರು.
ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವಿನ ಸಂಖ್ಯೆ 417 ಕ್ಕೆ ತಲುಪಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಇನ್ನೂ ಮುಂದುವರಿದಿದೆ. 10 ಸಾವಿರಕ್ಕೂ ಹೆಚ್ಚು ನಿರಾಶ್ರಿತರು ವಿವಿಧ ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ.