

ರಾಣೆಬೆನ್ನೂರ: ನಗರದಲ್ಲಿ ಸ್ಥಾಪನೆ ಮಾಡಲಾಗುತ್ತಿರುವ ಭಾರತ&ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ ಪರಾಕ್ರಮ ಮೆರೆದ ಯುದ್ಧ ಟ್ಯಾಂಕರ್ನ ಕಟ್ಟೆಯ ಕೆಳಗೆ ಅಳವಡಿಸಿರುವ ಸ್ಥಳಿಯ ಶಾಸಕರ ಭಾವಚಿತ್ರ ತೆಗೆಸಬೇಕು. ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಬಿಜೆಪಿ ನಗರ ಟಕದ ಅಧ್ಯಕ್ಷ ಮಂಜುನಾಥ ಕಾಟಿ ಎಚ್ಚರಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳಿಯ ಶಾಸಕರು ಸದನದಲ್ಲಿ ಯುದ್ಧ ಟ್ಯಾಂಕರ್ ಸ್ಥಾಪನೆಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಎದುರು ಹೇಳಿಕೊಂಡಿದ್ದಾರೆ.
ಆದರೆ, ಒಬ್ಬ ಶಾಸಕರಾಗಿ ಅವರು ಹೇಳಿಕೆ ನೀಡುವ ಮುನ್ನ ಯೋಚನೆ ಮಾಡಬೇಕು. ಬಿಜೆಪಿ ಯಾವೊಬ್ಬ ಕಾರ್ಯಕರ್ತರು ಯುದ್ಧ ಟ್ಯಾಂಕರ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ ಯಾರೂ ಪ್ರತಿಭಟನೆ ಸಹ ಮಾಡಿಲ್ಲ. ಹೀಗಿದ್ದರೂ ಶಾಸಕರು ವಿಧಾನಸಭೆಯಲ್ಲಿ ಯಾವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದರು.
ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಯುದ್ಧ ಟ್ಯಾಂಕರ್ ತರಲು ನಗರಸಭೆ ವತಿಯಿಂದ ಅನುದಾನ ನೀಡಲು ನಾವು ಸಹ ಅನುಮೋದನೆ ನೀಡಿದ್ದೇವೆ. ನಗರಸಭೆ ಅನುದಾನ ಬಳಸಿಕೊಂಡು ಟ್ಯಾಂಕರ್ ಇಡುವ ಕಟ್ಟೆಯ ಕೆಳಗೆ ಕೇವಲ ಶಾಸಕರ ಭಾವಚಿತ್ರ ಮತ್ತು ಅವರ ಸಂಸ್ಥೆಯ ಹೆಸರು ಹಾಕಿಸಿಕೊಳ್ಳುವುದು ಇವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು. ಸಂವಿಧಾನ ತಿಳುವಳಿಕೆ ಇರುವ ಶಾಸಕರು ಈ ರೀತಿ ನಡೆದುಕೊಳ್ಳುವುದು ಸರಿಯೆ ಎಂದರು.
ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ ಸದನದಲ್ಲಿ ಸುಳ್ಳು ಹೇಳಿರುವ ಶಾಸಕರು ಕೂಡಲೇ ಕ್ಷಮೆ ಯಾಚಿಸಬೇಕು. ಅವರ ನಮ್ಮ ಬೆಂಬಲ ಕೊಡಬೇಕಾದರೆ ರಾಣೆಬೆನ್ನೂರಿನಲ್ಲಿ ನಡೆಯುತ್ತಿರುವ ಮಟ್ಕಾ, ಇಸ್ಪೀಟ್ ದಂಧೆ ಬಂದ್ ಮಾಡಸಲಿ. ಗಾಂಜಾ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಿ, ಅದಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದರು.
ಮತ್ತೊಬ್ಬ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಶಾಸಕರು ಸರ್ಕಾರದ ಅನುದಾನ ಬಳಸಿಕೊಂಡು ಯುದ್ಧ ಟ್ಯಾಂಕರ್ ಕೆಳಗೆ ತಮ್ಮ ಪಿಕೆಕೆ ಸಂಸ್ಥೆ ಹೆಸರು ಮತ್ತು ತಮ್ಮ ಭಾವಚಿತ್ರ ಹಾಕಿಸಿ ಜನಪ್ರಿಯತೆ ಗಳಿಸಲು ಮುಂದಾಗಿದ್ದಾರೆ. ಈ ಹಿಂದೆ ಅವರ ತಂದೆಯವರಾದ ಕೆ.ಬಿ. ಕೋಳಿವಾಡರು, ಮಾಜಿ ಶಾಸಕ ಜಿ. ಶಿವಣ್ಣನವರು ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ, ಈ ರೀತಿ ತಮ್ಮ ೋಟೊ ಹಾಕಿಸಿ ಜನಪ್ರಿಯತೆ ಗಳಿಸುವ ಕೆಲಸಕ್ಕೆ ಮುಂದಾಗಿರಲಿಲ್ಲ. ಶಾಸಕರು ಇಂಥ ಕೆಲಸದ ಬದಲು ಅಭಿವೃದ್ಧಿ ಕೆಲಸ ಮಾಡಿ ತೋರಿಸಲಿ.
ನಮಗೆ ಯುದ್ಧ ಟ್ಯಾಂಕರ್ ಕಟ್ಟೆಯ ಮೇಲೆ ಶಾಸಕರ ಭಾವಚಿತ್ರ ಹಾಕಿಸಿರುವ ಕುರಿತು ಅನುಮಾನ ಬಂದ ಹಿನ್ನೆಲೆಯಲ್ಲಿ ನಾವೇ ಹೋಗಿ ಹಾಳೆ ತೆಗೆದು ನೋಡಿದ್ದೇವೆ. ಆದರೆ, ಹಾಳೆ ಹರಿದು ಅಪಮಾನ ಮಾಡಿಲ್ಲ. ಇದನ್ನು ಶಾಸಕರು ವಿಧಾನಸಭೆಯಲ್ಲಿ ಚಚಿರ್ಸಿ ಸಿಂಪತಿ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಶಾಸಕರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಲ್ಲಣ್ಣ ಅಂಗಡಿ ಮಾತನಾಡಿ, ಯುದ್ಧ ಟ್ಯಾಂಕರ್ ಕಟ್ಟೆಯ ಮೇಲೆ ಅದರ ಪರಾಕ್ರಮ ಕುರಿತು ಮಾಹಿತಿ ದಾಖಲಿಸಬೇಕು. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕಾರ್ಯಕ್ರಮ ಚನ್ನಾಗಿ ಮಾಡುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಶಿಷ್ಟಾಚಾರದ ಪ್ರಕಾರ ನಡೆದರೆ ಒಳ್ಳೆಯದು. ಇಲ್ಲವಾದರೆ ಮುಂದಿನ ದಿನದಲ್ಲಿ ಅಧಿಕಾರಿಗಳು ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರಸಭೆ ಉಪಾಧ್ಯಕ್ಷ ಕೆಎಂಪಿ ಮಣಿ, ಸದಸ್ಯ ಹುಚ್ಚಪ್ಪ ಮೇಡ್ಲೇರಿ, ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ ಸಿರಗೇರಿ, ಪ್ರಮುಖರಾದ ಭಾರತಿ ಜಂಬಗಿ, ಪರಮೇಶಪ್ಪ ಗೂಳಣ್ಣನವರ, ಸಿದ್ದು ಚಿಕ್ಕಬಿದರಿ, ಮಾಳಪ್ಪ ಪೂಜಾರ, ಕುಬೇರಪ್ಪ ಕೊಂಡಜ್ಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.