ಬಿಎಸ್​ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?

mp kumaraswamy-chowdamma
Published on

ಚಿಕ್ಕಮಗಳೂರು: ತನ್ನ ನೆಚ್ಚಿನ ನಾಯಕ ಸಿಎಂ ಆಗಬೇಕು ಎಂದು ಚೌಡಮ್ಮ ದೇವಿಯಲ್ಲಿ ಸಂಕಲ್ಪ ಮಾಡಿದ್ದ ಶಾಸಕರೊಬ್ಬರು ಕುರಿ ಮತ್ತು ಕೋಳಿ ಬಲಿ ಕೊಟ್ಟಿದ್ದಾರೆಂದು ತಿಳಿದು ಬಂದಿದೆ.

ಬಿ.ಎಸ್​. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಮೂಡಿಗೆರೆ ತಾಲೂಕಿನ ಭೈರಾಪುರದ ಸಮೀಪದ ಉಳಿಯೊ ಮನೆ ಚೌಡಮ್ಮ ದೇವಿಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಹರಕೆ ಹೊತ್ತಿದ್ದರಂತೆ. ಇಷ್ಟಾರ್ಥ ಸಿದ್ಧಿಸಿದ ಒಂದು ವರ್ಷದ ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಕಾಡಿನ ನಡುವೆ ಇರುವ ದೇವಿ ಸನ್ನಿಧಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಶಾಸಕರು ಪೂಜೆ ನೆರವೇರಿಸಿದರು.

ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿ ಒಂದು ವರ್ಷ ಪೂರೈಸಿದ್ದಾರೆ. ಈ ಖುಷಿಯಲ್ಲಿರುವ ಎಂ.ಪಿ. ಕುಮಾರಸ್ವಾಮಿ, ಬಿಎಸ್​ವೈ ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕು. ಅವರಿಗೆ ಮತ್ತಷ್ಟು ಯಶಸ್ಸು ಸಿಗಬೇಕು ಎಂದು ದೇವಿ ಮುಂದೆ ಕೋರಿದರು.

ಈ ವೇಳೆ ಶಾಸಕರು ಕುರಿ-ಕೋಳಿಯನ್ನು ಚೌಡಮ್ಮ ದೇವಿಗೆ ಒಪ್ಪಿಸಿದರು ಎನ್ನಲಾಗಿದ್ದು, ಪ್ರಾಣಿ ಬಲಿ ನಿಷೇಧವಿದ್ದರೂ ಶಾಸಕರು ಕೊಟ್ಟಿದ್ದಾರೆನ್ನಲಾದ ಹರಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಇಷ್ಟಾರ್ಥ ಸಿದ್ಧಿಸಲಿ ಎಂದು ಸಾಮಾನ್ಯವಾಗಿ ಎಲ್ಲರೂ ದೇವರ ಮೊರೆ ಹೋಗುವುದು ಸಹಜ. ಇದು ರಾಜಕೀಯ ಕ್ಷೇತ್ರವನ್ನೂ ಹೊರತಾಗಿಲ್ಲ. ತನ್ನ ನೆಚ್ಚಿನ ನಾಯಕ ಗೆಲುವು ಸಾಧಿಸಿದರೆ ಮುಡಿ ಕೊಡುವ, ಪಾದಯಾತ್ರೆ, ತೆಂಗಿನಕಾಯಿ ಹೊಡೆಯುವ, ಅನ್ನದಾನ.. ಹೋಮ.. ಹೀಗೆ ವಿವಿಧ ಹರಕೆಗಳನ್ನು ಆಯಾ ಪಕ್ಷದ ಕಾರ್ಯಕರ್ತರು ಇಲ್ಲವೇ ಅಭಿಮಾನಿಗಳು ಮಾಡಿಕೊಳ್ಳುತ್ತಾರೆ. ಇಲ್ಲಿ ಶಾಸಕರೇ ಖುದ್ದು  ಹರಕೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net