ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!

MLAtrain
Published on

ನವದೆಹಲಿ: ಬಿಹಾರದ ಆಡಳಿತಪಕ್ಷವಾದ ಜೆಡಿಯು ಶಾಸಕ ಗೋಪಾಲ್​ ಮಂಡಲ್​ ಅವರು ಗುರುವಾರ ರೈಲಿನಲ್ಲಿ ಪ್ರಯಾಣಿಸುವಾಗ, ಬೋಗಿಯಲ್ಲಿ ಬನಿಯನ್ ಮತ್ತು ಅಂಡರ್​ವೇರ್​ನಲ್ಲಿ ಓಡಾಡುತ್ತಿದ್ದುದು ಕಂಡುಬಂದಿದೆ. ಈ ಬಗ್ಗೆ ಇತರ ಪ್ರಯಾಣಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಜಗಳದ ಪ್ರಮೇಯ ಎದುರಾಗಿತ್ತು ಎಂದು ವರದಿಯಾಗಿದೆ.

ಗುರುವಾರ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್ ಟ್ರೈನಿನಲ್ಲಿ ಶಾಸಕ ಗೋಪಾಲ್​ ಮಂಡಲ್​ ಅವರು ಪಟ್ನಾದಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆ ಸಮಯದಲ್ಲಿ ತಮ್ಮ ಎಸಿ ಕೋಚ್​ನಲ್ಲಿ ಬಿಳಿ ಬನಿಯನ್​ ಮತ್ತು ಅಂಡರ್​ವೇರ್​ ಮಾತ್ರ ತೊಟ್ಟು ಓಡಾಡಿದರು ಎನ್ನಲಾಗಿದೆ.

"ಸಹಪ್ರಯಾಣಿಕರು ಶಾಸಕರ ನಡವಳಿಕೆ ಬಗ್ಗೆ ದೂರು ನೀಡಿದರು. ರೈಲ್ವೆ ಪೊಲೀಸ್ ಮತ್ತು ಟಿಟಿಇ, ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು" ಎಂದು ಈಸ್ಟ್​ ಸೆಂಟ್ರಲ್​ ರೈಲ್ವೆ ಸಿಪಿಆರ್​ಒ ರಾಜೇಶ್​ ಕುಮಾರ್​ ತಿಳಿಸಿದ್ದಾರೆಂದು ಎನ್​ಡಿಟಿವಿ ವರದಿ ಮಾಡಿದೆ.

ಮತ್ತೊಂದೆಡೆ ಮಂಡಲ್​ ಅವರು ತಾವು ಆ ರೀತಿ ಓಡಾಡಿದ್ದಕ್ಕೆ ತಮ್ಮ ಹೊಟ್ಟೆ ಕೆಟ್ಟಿದ್ದದ್ದೇ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ. "ಪ್ರಯಾಣದ ವೇಳೆ ನನ್ನ ಹೊಟ್ಟೆ ಕೆಟ್ಟಿದ್ದರಿಂದ ನಾನು ಒಳಉಡುಪುಗಳನ್ನು ಮಾತ್ರ ಧರಿಸಿದ್ದೆ" ಎಂದು ತಿಳಿಸಿರುವ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವೀಟ್​ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net