

ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಅಪರಾಧಕ್ಕೆ ಸಂಬಂಧಿಸಿದಂತೆ ಕೊನೆಗೂ ಶಾಸಕರೊಬ್ಬರಿಗೆ ಶಿಕ್ಷೆ ಜಾರಿಯಾಗಿದೆ. ಕೆಲ ಕಾಲದಿಂದ ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥಗೊಂಡಿದ್ದು, ಶಾಸಕರಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರತಿ ಈ ಅಪರಾಧಿ. ದೆಹಲಿ ನ್ಯಾಯಾಲಯ ಶಿಕ್ಷೆ ಕುರಿತ ಆದೇಶ ನೀಡಿದೆ. ಏಮ್ಸ್ ಕಾಂಪೌಂಡ್ ಒಡೆದು ಹಾಕಿ, ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.
2016 ರ ಸೆಪ್ಟೆಂಬರ್ 9ರಂದು ಸುಮಾರು 300 ಜನರೊಂದಿಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಆವರಣಕ್ಕೆ ನುಗ್ಗಿದ ಶಾಸಕ ಸೋಮನಾಥ ಭಾರತಿ ಜೆಸಿಬಿ ಬಳಸಿ ಆವರಣ ಒಡೆದು ಹಾಕಿದ್ದರು. ತಡೆಯಲು ಬಂದ ರಕ್ಷಣಾ ಸಿಬ್ಬಂದಿಯ ಮೇಲೆ ಕೂಡ ಹಲ್ಲೆ ನಡೆಸಿದ್ದರು ಎಂಬ ಆರೋಪ ಮಾಡಲಾಗಿತ್ತು. ಈ ಬಗ್ಗೆ ಏಮ್ಸ್ನ ಮುಖ್ಯ ರಕ್ಷಣಾ ಅಧಿಕಾರಿ ಆರ್.ಎಸ್.ರಾವತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಾಕ್ಷಿಗಳು ಸುಳ್ಳು ಸಾಕ್ಷಿ ನೀಡಿದ್ದಾರೆ ಎಂದು ಸೋಮನಾಥ ಭಾರತಿ ಪರ ವಕೀಲರು ವಾದಿಸಿದ್ದರು. ವಿಚಾರಣೆ ನಂತರ ಆರೋಪ ಸಾಬೀತಾಗಿದೆ ಎಂಬ ನಿರ್ಣಯಕ್ಕೆ ಬಂದಿರುವ ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಶಾಸಕರಿಗೆ ಎರಡು ವರ್ಷ ಜೈಲು ಶಿಕ್ಷೆಯೊಂದಿಗೆ ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದ್ದಾರೆ.
ಗಲಭೆ ನಡೆಸಿದ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಹಲ್ಲೆ ಮಾಡಿದ ಅಪರಾಧಗಳಿಗೆ ಐಪಿಸಿ ಸೆಕ್ಷನ್ 323, 353 ಮತ್ತು 147 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡುವ ಕೃತ್ಯಕ್ಕೆ ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆ್ಯಕ್ಟ್ನ ಸೆಕ್ಷನ್ 3ರ ಅಡಿಯಲ್ಲಿ ಕೂಡ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಸಹಆರೋಪಿಗಳಾಗಿದ್ದ ಜಗತ್ ಸೈನಿ, ದಿಲೀಪ್ ಝಾ, ಸಂದೀಪ್ ಸೋನು ಮತ್ತು ರಾಕೇಶ್ ಪಾಂಡೆ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಶಾಸಕ ಸೋಮನಾಥ ಅವರಿಗೆ ಹೈಕೋರ್ಟ್ನಲ್ಲಿ ಅಪೀಲು ಸಲ್ಲಿಸಲು ಅವಕಾಶ ಒದಗಿಸಿರುವ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. (ಏಜೆನ್ಸೀಸ್)