

ಕುಂದಾಪುರ: ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗ ಮಾಡಿರುವ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ವೆಚ್ಚ ಕಡಿಮೆ ಮಾಡಲು ಸಿಬ್ಬಂದಿ ಕಡಿತ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜನೆಗೊಂಡಿದ್ದ ಡೇಟಾ ಎಂಟ್ರಿ ಸಿಬ್ಬಂದಿಗೆ ಏಕಾಏಕೀ ನೋಟಿಸ್ ನೀಡಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆರೋಪಿಸಿದ್ದಾರೆ.
ಕುಂದಾಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿ ಜತೆಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊರಗುತ್ತಿಗೆ ಆಧಾರದಲ್ಲಿದ್ದ ಸಿಬ್ಬಂದಿಯನ್ನು ಕೈ ಬಿಡಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡೇಟಾ ಎಂಟ್ರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸಚಿವರು ವಾಪಸ್ ಕೆಲಸಕ್ಕೆ ಬರಲು ಸೂಚಿಸಿದ್ದಾರೆ. ಆದರೆ ಕೆಲಸದಿಂದ ತೆಗೆಯಲು ನೋಟಿಸ್ ನೀಡಿದವರು ವಾಪಸ್ ಕೆಲಸಕ್ಕೆ ಹಾಜರಾಗುವಂತೆ ಯಾವುದೇ ಲಿಖಿತ ಆದೇಶ ನೀಡಿಲ್ಲ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡೇಟಾ ಎಂಟ್ರಿ ಸಿಬ್ಬಂದಿಯನ್ನು ಮುಂದುವರಿಸಲು ಗಡುವು ನೀಡಲಾಗಿದೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡರಾದ ರಾಜೇಶ್ ಕಾವೇರಿ, ವಿನೋದ್‌ರಾಜ್ ಶಾಂತಿನಿಕೇತನ ಇದ್ದರು.