

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ತಾಲೂಕು ವಿವಿಧೋದ್ದೇಶ ಸೈಕ್ಲೋನ್ ಆಶ್ರಯ ತಾಣ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂತ್ರಸ್ತರಿಗೆ ಉತ್ತಮ ಸೌಲಭ್ಯ ನೀಡಿ, ರಕ್ಷಣಾ ಕಾರ್ಯಾಚರಣೆ ಮತ್ತು ಕಾಳಜಿ ವಹಿಸುವಲ್ಲಿ ಮುತುವರ್ಜಿ ತೋರಿದೆ ಎಂದು ನೀತಿ ಆಯೋಗದ ಮೌಲ್ಯಮಾಪಕ ಅನಂತ ಪಂತ್ ಅಭಿಪ್ರಾಯಪಟ್ಟರು.
ಕಾಪು ಪಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2017ರಲ್ಲಿ ಸ್ಥಾಪಿಸಲಾದ ವಿವಿಧೋದ್ದೇಶ ಸೈಕ್ಲೋನ್ ಆಶ್ರಯ ತಾಣಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಕೋಣೆಗಳು, ಅಡುಗೆ ಮನೆ, ಶೌಚಗೃಹ ನೀರಿನ ವ್ಯವಸ್ಥೆ ಪರಿಶೀಲಿಸಿ ಮಾತನಾಡಿ, ತಹಸೀಲ್ದಾರ್ ಪ್ರತಿಭಾ ಆರ್. ನೇತೃತ್ವದಲ್ಲಿ ರಕ್ಷಣಾ ಕಾರ್ಯ ಮತ್ತು ಕಾಳಜಿ ಕಾರ್ಯ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು. ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಮೌಲ್ಯಮಾಪಕ ಅನಂತ್ ಉತ್ತರಿಸಿದರು. ನೆರೆ ಉಂಟಾದ ಸಂದರ್ಭ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಾರೆ. ಆದರೆ ನೆರೆ ಇಳಿದ ನಂತರ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಯಾವ ಅಧಿಕಾರಿಗಳೂ ಇರುವುದಿಲ್ಲ. ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಕುರಿತು ಗಮನಹರಿಸಿ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಗಮನಕ್ಕೆ ತಂದರು. ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ., ಜಿಲ್ಲಾ ಪ್ರಕೃತಿ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ರವಿ, ಪುರಸಭೆ ಸದಸ್ಯ ನಾಗೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮನೋಜ್, ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ವೆಂಕಟೇಶ್, ಗ್ರಾಮ ಸಹಾಯಕ ದಿಲೀಪ್ ಮತ್ತಿತರರಿದ್ದರು.
ಮಳೆಗಾಲಕ್ಕೆ ಮೊದಲೇ ತಾಲೂಕಿನಲ್ಲಿ ಪೂರ್ವ ತಯಾರಿ ಮಾಡಲಾಗಿದೆ. ವಿವಿಧೋದ್ದೇಶ ಸೈಕ್ಲೋನ್ ಆಶ್ರಯ ತಾಣವನ್ನು ಅಗತ್ಯ ಪರಿಕರಗಳೊಂದಿಗೆ ಸಿದ್ಧಗೊಳಿಸಲಾಗಿದ್ದು, ಯಾವುದೇ ಸಂದರ್ಭಕ್ಕೂ ತಯಾರಾಗಿದ್ದೇವೆ. ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಭಾ ಆರ್., ತಹಸೀಲ್ದಾರ್ https://www.vijayavani.net/nayari-society-cultural-celebration-kalarava https://www.vijayavani.net/eye-check-up-camp-in-cuttbelthur