

ರಾಮನಗರ: ಬಿಡದಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ ಏಕಾಏಕಿ ಲಾಕ್ಔಟ್ ಮಾಡಿದ್ದು, ಕಾರ್ಮಿಕರು ಅತಂತ್ರರಾಗಿದ್ದಾರೆ.
ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಂಪನಿಯನ್ನು ಬಂದ್ ಮಾಡಲಾಗಿದೆ. ಎಂದಿನಂತೆ ಶುಕ್ರವಾರ 54 ಕಾಯಂ ಕಾರ್ಮಿಕರು ಕೆಲಸ ಮುಗಿಸಿ ಸಂಜೆ ಮನೆಗೆ ತೆರಳಿದ್ದಾರೆ. ಶನಿವಾರ 54 ಕಾರ್ಮಿಕರ ಬ್ಯಾಂಕ್ ಖಾತೆಗೆ 4 ಲಕ್ಷ ಹಣ ಕಂಪನಿ ಕಡೆಯಿಂದ ಜಮಾವಾಗಿದೆ. ಹಣ ಬಂದ ವಿಚಾರವಾಗಿ ಕಂಪನಿಯ ಎಚ್.ಆರ್ ಅವರನ್ನು ಸಂಪರ್ಕಿಸಿದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಸೋಮವಾರ ಕಾರ್ಮಿಕರನ್ನು ಪಿಕಪ್ ಮಾಡಲು ಕಂಪನಿಯಿಂದ ಕ್ಯಾಬ್ ಕೂಡ ಬಂದಿರಲಿಲ್ಲ. ತಮ್ಮ ವಾಹನಗಳಲ್ಲೇ ಕಂಪನಿಗೆ ಕಾರ್ಮಿಕರು ಆಗಮಿಸಿದ್ದಾರೆ. ಕಾರ್ಮಿಕರು ಒಳ ಬರುತ್ತಿದ್ದಂತೆ ಒಳಗೆ ಬಿಡದ ಭದ್ರತಾ ಸಿಬ್ಬಂದಿ, ಗೇಟ್ ಲಾಕ್ ಮಾಡಿ ಹೊರಗೆ ಕಳುಹಿಸಿದ್ದಾರೆ.
'ನಮ್ಮ ಪೂರ್ವಾನುಮತಿಯಿಲ್ಲದೆ ಯಾವುದೇ ವ್ಯಕ್ತಿಗಳು ಕಂಪನಿಯ ಆವರಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ' ಎಂದು ಗೇಟ್ ಬಳಿ ಕಂಪನಿ ವತಿಯಿಂದ ನೋಟಿಸ್ ಅಂಟಿಸಲಾಗಿದೆ.
ಈ ಕಂಪನಿಯಲ್ಲಿ ಬೆಳಗಾವಿ, ಬಿಜಾಪುರ, ಮಂಡ್ಯ, ಹಾಸನ ಸೇರಿ ಹಲವು ಹೊರ ಜಿಲ್ಲೆಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಏಕಾಏಕಿ ಲಾಕ್ಔಟ್ ಮಾಡಿರುವುದನ್ನ ನೋಡಿ ಕಾರ್ಮಿಕರಿಗೆ ಆಘಾತವಾಗಿದೆ. ಇಂದು ಸಂಜೆ ಕಂಪನಿ ಪರವಾಗಿ ಅಧಿಕಾರಿಗಳು ಬಂದು ಮಾತನಾಡುವುದಾಗಿ ಕಾರ್ಮಿಕರಿಗೆ ಸೂಚಿಸಲಾಗಿದೆ. ಬೆಮೆಲ್, ಮೆಟ್ರೋಗೆ ಅಗತ್ಯವಾದ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನ ಸರಬರಾಜು ಮಾಡುವ ಕಂಪನಿ ಇದಾಗಿತ್ತು.