

ಚಿಕ್ಕಮಗಳೂರು: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ರ ಸಾವಿನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಚನ್ನಗಿರಿ ಪಿಎಸ್ಐ ನೇತೃತ್ವದ ನಾಲ್ವರ ತಂಡ, ಆಶ್ರಮಕ್ಕೆ ಈಗಾಗಲೇ ನಾಲ್ಕು ಬಾರಿ ಭೇಟಿ ನೀಡಿದೆ. ಆಶ್ರಮದ ಸಿಬ್ಬಂದಿ ಮತ್ತು ಉಸ್ತುವಾರಿ ವಹಿಸಿರುವ ಭಕ್ತರಿಂದ ಮಾಹಿತಿ ಪಡೆದಿದೆ. ವಿನಯ್ ಗುರೂಜಿ ಅವರಿಂದಲೂ ಮಾಹಿತಿ ಕಲೆ ಹಾಕಿದೆ.
ಅ.30ರ ರಾತ್ರಿಯಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್, ಸೆ.4ರ ಸಂಜೆ ನ್ಯಾಮತಿ ಮತ್ತು ಹೊನ್ನಾಳಿ ಮಧ್ಯೆ ಇರುವ ತುಂಗಾ ಮೇಲ್ಡಂಡೆ ನಾಲೆಯ ನೀರಲ್ಲಿ ಶವವಾಗಿ ಪತ್ತೆಯಾಗಿದ್ದರು. ಚಂದ್ರಶೇಖರ್ರ ಕಾರು ನಾಲೆಯಲ್ಲಿ ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ನಾಲೆಯಿಂದ ಕಾರನ್ನು ಹೊರತೆಗೆದಿದ್ದು, ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಅಪಘಾತವೋ, ಕೊಲೆಯೋ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕುಟುಂಬಸ್ಥರು ಕೊಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚಂದ್ರಶೇಖರ್ ನಾಪತ್ತೆಗೂ ಮುನ್ನ ಗೌರಿಗದ್ದೆಯ ಆಶ್ರಮಕ್ಕೆ ಭೇಟಿ ನೀಡಿದ್ದರು. ಗೌರಿಗದ್ದೆಯಿಂದ ಶಿವಮೊಗ್ಗಕ್ಕೆ ಬಂದ ಬಳಿಕ ಹೊನ್ನಾಳಿ ಕಡೆಗೆ ಹೊರಟ ಚಂದ್ರಶೇಖರ್ ಅವರ ಕ್ರೆಟಾ ಕಾರನ್ನು ಸ್ವಿಪ್ಟ್ ಡಿಸೈರ್ ಕಾರೊಂದು ಹಿಂಬಾಲಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಆ ಕಾರಿಗೂ ಈ ಪ್ರಕರಣಕ್ಕೂ ಲಿಂಕ್ ಇದೆಯೇ ಎಂದೂ ಪರಿಶೀಲಿಸಲಾಗುತ್ತಿದೆ.
ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆಂದು ಹೊನ್ನಾಳಿಯಿಂದ ಬಿಳಿ ಬಣ್ಣದ ಕ್ರೆಟಾ ಕಾರಿನಲ್ಲಿ ಹೊರಟ ಚಂದ್ರಶೇಖರ್, ಶಿವಮೊಗ್ಗದಲ್ಲಿ ಕೆಲ ಸ್ನೇಹಿತರೊಂದಿಗೆ ಜತೆಯಾಗಿ ಗುರೂಜಿ ಅವರನ್ನ ಭೇಟಿಯಾಗಲು ತೆರಳಿದ್ದರು. ಆದರೆ ಗೌರಿಗದ್ದೆಗೆ ತಲುಪಿದ್ದು ಚಂದ್ರು ಅವರ ಬಿಳ್ಳಿ ಬಣ್ಣದ ಕಾರಲ್ಲ, ಬದಲಾಗಿ ಗ್ರೇ ಬಣ್ಣದ ಕಾರು! ಇದನ್ನು ವಿನಯ್ ಗುರೂಜಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ರೇಣುಕಾಚಾರ್ಯ ಅವರು ಮಾಹಿತಿ ನೀಡಿದ್ದರು. ಈ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ.