ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ: ಕೊನೆಗೂ ಮೌನ ಮುರಿದ ಮಿಚೆಲ್​ ಮಾರ್ಷ್​

Mitchell Marsh
Published on

ನವದೆಹಲಿ: ವಿಶ್ವಕಪ್​ ಫೈನಲ್​ನಲ್ಲಿ ಭಾರತ ವಿರುದ್ಧ ಗೆಲುವು ದಾಖಲಿಸಿ ಆರನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿದೆ. ಆಸೀಸ್​ ವಿಶ್ವಕಪ್​ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿದ್ದು ಮಿಚೆಲ್​ ಮಾರ್ಷ್​ ಅವರ ವಿವಾದಾತ್ಮಕ ಫೋಟೋ. ಫೈನಲ್ ಪಂದ್ಯದ ಬಳಿಕ ಮಿಚೆಲ್​ ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ ಪಡೆದಂತಹ ಫೋಟೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯಿತು ಮತ್ತು ಸಾಕಷ್ಟು ಟೀಕೆಗಳಿಗೆ ಗುರಿಯಾಯಿತು. ಇದೀಗ ಆ ವಿವಾದದ ಕುರಿತು ಕೊನೆಗೂ ಮಿಚೆಲ್​ ಮಾರ್ಷ್​ ಮೌನ ಮುರಿದಿದ್ದಾರೆ.

ನ.19ರಂದು ಗುಜರಾತಿನ ಅಹಮದಾಬಾದ್​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್​ ಹೆಡ್​ (137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ಶತಕದ ನೆರವಿನಿಂದ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಅಂತರದಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಈ ಮೂಲಕ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿದು ಮತ್ತೊಮ್ಮೆ ಇತಿಹಾಸ ಬರೆಯಿತು. ಆಸೀಸ್​ ಆಟಗಾರರು ವಿಜಯೋತ್ಸವ ಆಚರಿಸಿದ ಬಳಿಕ ರೂಮ್​ನಲ್ಲಿ ಇರುವಾಗ ಮಿಚೆಲ್ ಮಾರ್ಷ್​ ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟಿದ್ದರು. ಈ ಫೋಟೋ ವೈರಲ್​ ಆಗಿತ್ತು. ಕೆಲವರು ಇದನ್ನು ನಕಲಿ ಎಂದಿದ್ದರು. ಆದರೆ, ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​ ಸ್ವತಃ ಶೇರ್​ ಮಾಡಿಕೊಂಡಾ ನಕಲಿ ಅಲ್ಲ ಅಸಲಿ ಎಂಬುದು ಖಚಿತವಾಯಿತು.

ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಇದೀಗ ಮಿಚೆಲ್​ ಮಾರ್ಷ್​ ಉತ್ತರ ನೀಡಿದ್ದಾರೆ. ಆ ಫೋಟೋದಲ್ಲಿ ನಿಸ್ಸಂಶಯವಾಗಿ ಯಾವುದೇ ಅಗೌರವ ಇರಲಿಲ್ಲ. ಫೋಟೋ ವೈರಲ್​ ಆಗಿ ನಿನ್ನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ ಎಂದು ಎಲ್ಲರು ಹೇಳಿದಾಗ ನಾನು ಅದರ ಬಗ್ಗೆ ಹಚ್ಚು ಯೋಚನೆ ಮಾಡಲಿಲ್ಲ ಮತ್ತು ಸಾಮಾಜಿಕ ಜಾಲತಾಣವನ್ನು ನೋಡಲಿಲ್ಲ. ಮತ್ತೊಮ್ಮೆ ಹೇಳುವುದೇನೆಂದರೆ, ಆ ಫೋಟೋದಲ್ಲಿ ಅಂಥದ್ದು ಏನೂ ಇರಲಿಲ್ಲ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವಿಶ್ವಕಪ್‌ನ ನಂತರ ಕೆಲವು ಆಸ್ಟ್ರೇಲಿಯಾ ಕ್ರಿಕೆಟಿಗರು ಭಾರತದಲ್ಲಿ ಉಳಿದುಕೊಂಡಿದ್ದು, ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ T20 ಸರಣಿಯ ಬಗ್ಗೆ ಮಾತನಾಡಿದ ಮಾರ್ಷ್, ನಮ್ಮ ಹುಡುಗರಿಗೆ ಇದು ಅತಿರೇಕದ ಸಂಗತಿಯಾಗಿದೆ. ನಮ್ಮವರಿಗೆ ಕೊಂಚ ಸಮಯ ಬೇಕಾಗಿತ್ತು. ಆದರೂ ಆಸ್ಟ್ರೇಲಿಯಾಕ್ಕಾಗಿ ಆಡುತ್ತಿರುವುದನ್ನು ನಾವು ಗೌರವಿಸಬೇಕಾಗಿದೆ. ಭಾರತದ ವಿರುದ್ಧದ ಸರಣಿ ದೊಡ್ಡ ಸರಣಿಯಾಗಿದೆ. ಆದರೆ, ಇದರಲ್ಲಿನ ಮಾನವೀಯ ಅಂಶ ಏನೆಂದರೆ, ನಮ್ಮ ಹುಡುಗರು ಈಗಷ್ಟೇ ವಿಶ್ವಕಪ್ ಗೆದ್ದಿದ್ದಾರೆ. ಬಹುಶಃ ಸ್ವಲ್ಪ ಸಮಯದವರೆಗೆ ಆಚರಿಸಲು ಮತ್ತು ಕುಟುಂಬಗಳ ಜತೆ ಕಾಲ ಕಳೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು.

ಅಂದಹಾಗೆ ಮಾರ್ಷ್ ಅವರು ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರ. 10 ಪಂದ್ಯಗಳಿಂದ 49ರ ಸರಾಸರಿಯಲ್ಲಿ 441 ರನ್ ಗಳಿಸಿದರು. ಎರಡು ಶತಕ ಮತ್ತು ಒಂದು ಅರ್ಧ ಶತಕದೊಂದಿಗೆ 107.56 ಸ್ಟ್ರೈಕ್-ರೇಟ್‌ ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net