ವಿದೇಶಕ್ಕೆ ಏಕಾಂಗಿ ಪ್ರವಾಸ ಕೈಗೊಂಡಿದ್ದವನು ನಾಪತ್ತೆ; ನನ್ನ ತಮ್ಮನನ್ನು ಹುಡುಕಿಕೊಡಿ ಎಂದು ಜಾಲತಾಣದಲ್ಲಿ ಸಹೋದರನ ಅಳಲು

Missing
Published on

ಮುಂಬೈ: ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದ ಯುವಕನೋರ್ವ ಈಗ ಕುಟುಂಬದ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವ ಘಟನೆ ನಡೆದಿದೆ. ಎರಡು ವಾರಗಳಿಂದ ಆತನ ಫೋನೂ ಇಲ್ಲ, ಮೆಸೆಜೂ ಇಲ್ಲ, ಇತ್ತ ಕುಟುಂಬಸ್ಥರ ಕಣ್ಣೀರು ನೋಡಲಾಗ್ತಿಲ್ಲ.

28 ವರ್ಷದ ಮಣಿಕಂಠ ಕೊಂಡವೀತಿ ಎಂಬ ಯುವಕ ವಿದೇಶ ಪ್ರವಾಸ ಕೈಗೊಂಡಿದ್ದ. ಅಲ್ಲಿ ತಲುಪಿರುವ ಬಗ್ಗೆಯೂ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದ, ಅದಾದ ಬಳಿಕ ಆತನ ಪತ್ತೆಯೇ ಇಲ್ಲದಂತಾಗಿದೆ.

ಏಪ್ರಿಲ್​ 26 ರಂದು ಭಾರತ ತೊರೆದಿದ್ದ ಈತ ನಾಪತ್ತೆಯಾದ ದಿನ ಕೂಡ ಕುಟುಂಬಸ್ಥರಿಗೆ ಮೆಸೇಜ್​ ಮಾಡಿದ್ದಾನೆ. ಆ ಬಳಿಕ ಇಂದಿನವರೆಗೂ ಇವನ ಪತ್ತೆಯೇ ಇಲ್ಲ. ಮೇ 12 ರಂದು ತನ್ನ ಸಹೋದರನಿಗೆ ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿದ್ದ. ಆ ಬಳಿಕ ಈತ ಎಲ್ಲಿಗೆ ಹೋದ ಎಂಬುದೇ ತಿಳಿಯುತ್ತಿಲ್ಲ ಎಂದು ಆತನ ಸಹೋದರ ಅಳಲು ತೋಡಿಕೊಂಡಿದ್ದಾನೆ.

ಅಂದಹಾಗೆ ಈ ಯುವಕ ಪ್ರವಾಸ ಕೈಗೊಂಡಿದ್ದ ದೇಶ ಯಾವುದು ಗೊತ್ತಾ... ಯೂರೋಪ್​​ನ ಸುಂದರ ದೇಶವಾಗಿರುವ ಅಜೆರ್ಬೈಜಾನ್​ ರಾಷ್ಟ್ರ. ಇದು ಹೆಚ್ಚು ಚಿರಪರಿಚಿತವಲ್ಲದಿದ್ದರೂ, ಕೆಲವರಿಗೆ ಪರಿಚಿತವೂ ಹೌದು. ಯುರೋಪ್​ಖಂಡದ ಸುಂದರ ರಾಷ್ಟ್ರಗಳಲ್ಲಿ ಇದೂ ಕೂಡ ಸೇರಿದೆ.

ಇಲ್ಲಿದೆ ಪ್ರವಾಸಕ್ಕೆ ಹೊರಟ ಮಣಿಕಂಠನ್​ನ ಪತ್ತೆಯೇ ಇಲ್ಲ. ಈತನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ನೋಡಿ ಈತನೇ ನನ್ನ ತಮ್ಮ ದಯವಿಟ್ಟು ಈತನನ್ನು ಹುಡುಕಿಕೊಡಿ. ಈ ದೇಶಕ್ಕೆ ಯಾರಾದರೂ ನಿಮ್ಮ ಸಂಬಂಧಿಕರಿದ್ದರೆ ದಯವಿಟ್ಟು ಅವರಿಗೂ ನನ್ನ ತಮ್ಮನ ಫೋಟೋ ತೋರಿಸಿ ಎಂದು ಈತನ ಸಹೋದರ ಮನವಿ ಮಾಡಿದ್ದಾನೆ.

ಇನ್ನೂ ಅಜೆರ್ಬೈಜಾನ್​ ದೇಶದ ರಾಯಭಾರ ಕಚೇರಿಗೂ ಮನವಿ ಮಾಡಿದ್ದು, ಅವರು, ಈತ ಯಾವುದೋ ಬೆಟ್ಟಗುಡ್ಡಗಳಲ್ಲಿ ಪ್ರವಾಸ ಕೈಗೊಂಡಿರಬಹುದು. ನೀವೂ ಧೈರ್ಯದಿಂದಿರಿ, ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಆತ ಎಲ್ಲಿ ಕಳೆದುಹೋದನೋ, ಊಟ, ನೀರು ಸಿಕ್ಕಿದಿಯೋ, ಇಲ್ಲವೋ ಯಾವ ಕಷ್ಟ ಎದುರಿಸುತ್ತಿದ್ದಾನೋ ಎಂದು ಕುಟುಂಬಸ್ಥರು ನೋವಿನಲ್ಲಿ ಕಾಲ ಕಳೆಯುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net