2023ರ ಮೊದಲ ಸಿನಿಮಾ ಆಗಿ ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಿಸ್​ ನಂದಿನಿ' ಬಿಡುಗಡೆ

Miss Nandini
Published on

ಬೆಂಗಳೂರು: ಈ ವರ್ಷ (2022) ಮುಗಿಯುವುದಕ್ಕೆ ಬಂದಿದೆ. ಇನ್ನು, ಮುಂದಿನ ವಾರಗಳಲ್ಲಿ ಎಂಟ್ಹತ್ತು ಸಿನಿಮಾಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಒಟ್ಟಾರೆ ಈ ವರ್ಷ 200 ಪ್ಲಸ್​ ಚಿತ್ರಗಳು ಬಿಡಗುಡೆಯಾಗಲಿವೆ. ಈಗಾಗಲೇ ಮುಂದಿನ ವರ್ಷದ ಕುರಿತು ಕುತೂಹಲ ಶುರುವಾಗಿದ್ದು, ಮುಂದಿನ ವರ್ಷ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಈ ವರ್ಷ 'ನಮ್ಮ ಭಾರತ' ಎಂಬ ಕಲಾತ್ಮಕ ಸಿನಿಮಾದೊಂದಿಗೆ ಶುರುವಾಗಿತ್ತು. ಮುಂದಿನ ವರ್ಷವು ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಿಸ್​ ನಂದಿನಿ' ಚಿತ್ರದೊಂದಿಗೆ ಪ್ರಾರಂಭವಾಗಲಿದೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಜನವರಿ 06ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಗುತ್ತಿದೆ.

ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಇದುವರೆಗೂ ಹಲವು ಚಿತ್ರಗಳಲ್ಲಿ ಹೋರಾಟ ಮಾಡಲಾಗಿದೆ. ಈಗ ಪ್ರಿಯಾಂಕಾ ಉಪೇಂದ್ರ ಸಹ 'ಮಿಸ್​ ನಂದಿನಿ' ಚಿತ್ರದ ಮೂಲಕ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡವಷ್ಟೇ ಅಲ್ಲ ಹಿಂದಿ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಬಂಗಾಲಿ ಭಾಷೆಗಳಲ್ಲೂ ಮೂಡಿಬರುತ್ತಿದೆ. ಈ ಚಿತ್ರದ ಚಿತ್ರೀಕರಣ ಸೋಮವಾರ ಮುಗಿದಿದೆ.

ಈ ಚಿತ್ರದ ಕುರಿತು ಮಾತನಾಡಿರುವ ಪ್ರಿಯಾಂಕಾ ಉಪೇಂದ್ರ, 'ನಗರದ ಟೀಚರ್​ ಒಬ್ಬರು ಹಳ್ಳಿ ಶಾಲೆಯನ್ನು ಪರಿವರ್ತನೆ ಮಾಡುವ ಕಥೆ ಇದು. ನಾನು ಅಮೆರಿಕಾದ ಸರ್ಕಾರಿ ಶಾಲೆಯಲ್ಲಿ ಓದಿದವಳು. ಅಲ್ಲಿ ಎಷ್ಟು ಚೆನ್ನಾಗಿರುತ್ತದೆ ಅಂದರೆ, ಖಾಸಗೀ ಶಾಲೆಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಆದರೆ, ಇಲ್ಲಿ ಹಾಗಿಲ್ಲ. ಏನೇನೋ ಸಮಸ್ಯೆಗಳಿಂದಾಗಿ ಸರ್ಕಾರಿ ಶಾಲೆಗಳೆಂದರೆ ಒಂಥರಾ ನೋಡುವ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳಿಗೆ ಕೋಟ್ಯಂತರ ಹಣ ಬರುತ್ತದೆ. ಆದರಲ್ಲಿ ದುರುಪಯೋಗವಾಗುವುದೇ ಹೆಚ್ಚು. ಅದನ್ನು ಹೇಗೆ ಸರಿ ಮಾಡುವುದು? ಈ ವಿಷಯವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಮನರಂಜನೆ ಜತೆಗೆ ಸಂದೇಶವೂ ಇದೆ' ಎನ್ನುತ್ತಾರೆ ಪ್ರಿಯಾಂಕಾ.

'ಮಿಸ್​ ನಂದಿನಿ' ಚಿತ್ರವನ್ನು ಗುರುದತ್​ ಬರೆದು ನಿರ್ದೇಶಿಸಿದ್ದಾರೆ. ವಿಜಯ ಪ್ರೊಡಕ್ಷನ್ಸ್​ನಡಿ ನೀಲಕಂಠಸ್ವಾಮಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಾಯಿಸತೀಶ್​ ಸಂಗೀತ ಸಂಯೋಜಿಸಿದರೆ, ವೀನಸ್​ ನಾಗರಾಜ್​ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net