

ಚೆನ್ನೈ: ನಂದಿ ವಿಗ್ರಹ ನೀರು ಕುಡಿಯುತ್ತಿದೆ ಅಂತ ಅದನ್ನು ನೋಡಲು ಜನರು ಮುಗಿಬಿದ್ದ ಘಟನೆ ಕೆಲವು ದಿನಗಳ ಹಿಂದೆ ರಾಜ್ಯದ ಕಲಬುರಗಿಯಲ್ಲಿ ನಡೆಯಿತು. ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಜನರು ತಂಡೋಪತಂಡವಾಗಿ ಆಗಮಿಸಿ ನಂದಿ ವಿಗ್ರಹಕ್ಕೆ ನೀರು ಕುಡಿಸಲು ಯತ್ನಿಸಿದರು. ಇದೀಗ ಅದೇ ರೀತಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆದರೆ, ಈ ಪ್ರಕರಣದಲ್ಲಿನ ವ್ಯತ್ಯಾಸ ಏನೆಂದರೆ, ಇಲ್ಲಿ ಗಣೇಶ ಮೂರ್ತಿ ನೀರಿನ ಬದಲಾಗಿ ಹೂವನ್ನು ನುಂಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೆರಿಯನಾಯಕಿ ಅಂಬಾಳ್ ಉದನೂರೈ ಅರುಲ್ಮಿಕು ಪುರಾಧನಾ ವನೇಶ್ವರರ್ ದೇವಾಲಯವು ತಂಜಾವೂರು ಜಿಲ್ಲೆಯ ಪತ್ತುಕೊಟ್ಟೈ ವೃತ್ತದಲ್ಲಿರುವ ತಿರುಚಿರಾಪಳ್ಳಿಯಲ್ಲಿದೆ. ಈ ಸ್ಥಳದಲ್ಲಿರುವ ಗಣೇಶನ ವಿಗ್ರಹವು ವಿಶಿಷ್ಟವಾಗಿದೆ.
ಪೆರಿಯನಾಯಕಿ ಅಮ್ಮನ್ ದೇಗುಲದ ಬಲಭಾಗದಲ್ಲಿ ಸಣ್ಣ ಗಣೇಶನ ಮೂರ್ತಿ ಇದೆ. ಈ ಗಣೇಶನು ಹೂವುಗಳನ್ನು ನುಂಗುತ್ತಾನೆ ಎಂದು ಹೇಳಲಾಗಿದೆ. ಭಕ್ತರು ತಮ್ಮ ಕಾರ್ಯಗಳು ನೆರವೇರುವಂತೆ ಪ್ರಾರ್ಥಿಸಲು ಹೂವು ನುಂಗುವ ಗಣೇಶನ ಕಿವಿಯ ರಂಧ್ರಗಳಿಗೆ ಹೂವುಗಳನ್ನು ಇಡುತ್ತಾರೆ. ಅವರ ಆಸೆ ಈಡೇರುವುದಾದರೆ ಕಿವಿಯ ರಂಧ್ರಗಳಿಗೆ ಇಡಲಾದ ಹೂವುಗಳು ಒಳಗೆ ಹೋಗುತ್ತವೆ. ಈಡೇರುವುದಿಲ್ಲ ಎಂದರೆ, ಕಿವಿಯಲ್ಲಿ ಇಡಲಾದ ಹೂವುಗಳು ಹಾಗೇ ಇರುತ್ತವೆ.
ಇದೀಗ ಗಣೇಶ ಹೂವು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಇದು ಎಷ್ಟು ನಿಜವೋ ಗೊತ್ತಿಲ್ಲ, ಆದರೆ, ವಿಡಿಯೋ ಮಾತ್ರ ಹಲವರನ್ನು ಅಚ್ಚರಿಗೆ ದೂಡಿದೆ. ಇನ್ನು ಕೆಲವರು ಈ ವಿಡಿಯೋ ಎಡಿಟ್ ಮಾಡಿರುವ ವಿಡಿಯೋ ಆಗಿದೆ. ಜನರನ್ನು ಮರಳು ಮಾಡಲು ಅಥವಾ ವಂಚಿಸುವ ತಂತ್ರವಿದು ಎಂದಿದ್ದಾರೆ. ಇನ್ನು ಕೆಲವು ಇದು ನಿಜಕ್ಕೂ ಪವಾಡ ಎಂದಿದ್ದಾರೆ. (ಏಜೆನ್ಸೀಸ್)