

ಮುಂಬೈ: ಮಹಿಳಾ ಪೊಲೀಸ್ ಅಧಿಕಾರಿ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಮುಂಬೈನ ಸೂರ್ಯನಗರದಲ್ಲಿ ನಡೆದಿದೆ.
ಮೂವರು ಆರೋಪಿಗಳ ಬಂಧನದ ಸುದ್ದಿ ಪ್ರದೇಶದ ಸುತ್ತ ವ್ಯಾಪಕವಾಗಿ ಹರಡಿದ್ದು, ಘರ್ಷಣೆಯಾಗುವ ಸಂಭವವಿದೆ. ಸೂರ್ಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾರ್ಕ್ಸೈಟ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ರಾತ್ರಿ 11 ಘಂಟೆ ಸುಮಾರಿಗೆ ಮಹಿಳಾ ಅಧಿಕಾರಿ ತಮ್ಮ ಕೆಲಸ ಮುಗಿಸಿ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದರು. ಆ ನಂತರ ಸಂಬಂಧಿಕರ ಮನೆಯಿಂದ ಕುಟುಂಬ ಸದಸ್ಯರ ಜತೆಗೆ ಊಟಕ್ಕೆಂದು ಹೊರಗಡೆ ಹೋಗುವ ವೇಳೆ ದಾರಿ ಮಧ್ಯದಲ್ಲಿ ಅಪ್ರಾಪ್ತ ವಯಸ್ಕನೋರ್ವ ಪೊಲೀಸ್ ಅಧಿಕಾರಿಯನ್ನು ಅಡ್ಡಗಟ್ಟಿ ಆಕೆಗೆ ಕಿರುಕುಳ ನೀಡಿದ್ದಾನೆ.
ಕೂಡಲೇ ಆತನನ್ನು ಹಿಡಿಯಲು ಯತ್ನಿಸಿದರಾದರೂ ಆತ ಇನ್ನಿಬ್ಬರು ಆರೋಪಿಗಳ ಸಹಾಯದೊಂದಿಗೆ ತಪ್ಪಿಸಿಕೊಂಡಿದ್ದಾನೆ. ಕೂಡಲೇ ಸಂತ್ರಸ್ತೆ ಹತ್ತಿರದಲ್ಲಿದ್ದ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಎಚ್ಚೆತ್ತ ಅಧಿಕಾರಿಗಳ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಪ್ರಕರಣ ದಾಖಲಾದ 24 ಘಂಟೆಯೊಳಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ಮುಗಿದ ಬಳಿಕ ಚಾರ್ಜ್ಶೀಟ್ ಸಿದ್ದಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪಾರ್ಕ್ಸೈಟ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಶುಕ್ರವಾರ ಸಂಜೆ ನಡೆಯುತ್ತಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕೋಮು ಸೌಹಾರ್ದತೆ ಕದಡಲು ಈ ರೀತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಹಲವು ಹಿಂದೂಪರ ಸಂಘಟನೆಗಳು ಪಾರ್ಕ್ಸೈಟ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿವೆ.