

ಆನೇಕಲ್: ಟ್ರ್ಯಾಕ್ಟರ್ ವಾಟರ್ ಟ್ಯಾಂಕರ್ ಹರಿದು ಬಾಲಕನೊಬ್ಬನನ್ನು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಿ.ಕೆ. ಪಾಳ್ಯದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಆರೋಪ ಕೇಳಿಬಂದಿದೆ.
ಮೃತ ಬಾಲಕನನ್ನು ಭುವನ್ ಎಂದು ಗುರುತಿಸಲಾಗಿದೆ. ಈತ ಸಿ.ಕೆ. ಪಾಳ್ಯದ ನಿವಾಸಿ. ತನ್ನ ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ವಾಪಸ್ ಮನೆಗೆ ಬರುವಾಗ ಟ್ರ್ಯಾಕ್ಟರ್ನ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂದು (ಜೂ. 7) ಬೆಳಗ್ಗೆ 9. 30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಅಪಘಾತದ ಬೆನ್ನಲ್ಲೇ ಬಾಲಕನನ್ನು ಪಾಲಕರು ಆಸ್ಪತ್ರೆಗೆ ಸೇರಿಸಿದರು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಇನ್ನೂ ಎರಡು ದಿನದಲ್ಲಿ ಬಾಲಕ ಶಾಲೆಗೆ ಹೋಗಬೇಕಿತ್ತು. ಇದೀಗ ಮಗನನ್ನು ಕಳೆದುಕೊಂಡಿದ್ದಕ್ಕೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ವಾಟರ್ ಟ್ಯಾಂಕರ್ ಟಿ. ಚಿನ್ನಣ್ಣ ಎಂಬುವರಿಗೆ ಸೇರಿದ್ದಾಗಿದೆ. ಘಟನೆ ಬೆನ್ನಲ್ಲೇ ಚಾಲಕನ ವಾಟರ್ ಟ್ಯಾಂಕರ್ ಅನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಚಾಲಕನ ಹೆಸರು ಚಂದ್ರು. ಈತ ಕಲಬುರಗಿಯ ನಿವಾಸಿ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವುದೇ ರೀತಿಯ ದಾಖಲೆಗಳಿಲ್ಲದೆ ಟ್ಯಾಂಕರ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)