ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸುವ ವಿಚಾರ; ಉನ್ನತ ಶಿಕ್ಷಣ ಸಚಿವರ ಅಭಿಪ್ರಾಯವಿದು...

ASN
Published on

ಮಂಡ್ಯ: ಗುಜರಾತ್ ಸರ್ಕಾರ ಅಲ್ಲಿನ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಲು ಮುಂದಾಗಿರುವ ಬೆನ್ನಿಗೇ ಕರ್ನಾಟಕದ ಪಠ್ಯದಲ್ಲೂ ಭಗವದ್ಗೀತೆಯನ್ನು ಸೇರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದನ್ನು ಬೆಂಬಲಿಸಿ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗಿದ್ದರೂ ಅಲ್ಲಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿರುವುದೂ ಇದೆ.

ಈ ಕುರಿತು ಮುಖ್ಯಮಂತ್ರಿಯಾದಿಯಾಗಿ ಹಲವರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇಂದು ಮಾತನಾಡಿದ ಅವರು ಈ ವಿಷಯವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನ ವಿದ್ಯಾಭ್ಯಾಸದ ಮೂಲಕ ನಮ್ಮ‌ ಮಕ್ಕಳು ಕಲಿಯಬೇಕು. ಅದಕ್ಕೆ ಸಂಬಂಧಪಟ್ಟ ಸ್ಕೂಲ್ ಬೋರ್ಡ್ ಹಾಗು ವಿಶ್ವವಿದ್ಯಾಲಯ ನಿರ್ಣಯ ತೆಗೆದುಕೊಳ್ಳುತ್ತೆ. ಕಾಂಗ್ರೆಸ್​ನವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಅವರು ಕರೊನಾ ವ್ಯಾಕ್ಸಿನ್​ಗೂ ವಿರೋಧ ಮಾಡಿದ್ದರು. ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದರು ಎಂದು ಸಚಿವರು ಹೇಳಿದರು.

ಕಾಂಗ್ರೆಸ್​ನವರು ಕಾರಣವಿಲ್ಲದೆ ವಿರೋಧಿಸುತ್ತಾರೆ. ಈಗಾಗಲೇ ದೇಶದ ಭಾವನೆ ಹಾಗೂ ಸಂಸ್ಕೃತಿ ವಿಚಾರದಲ್ಲಿ ವಿರೋಧ ಮಾಡಿದರು. ನಮ್ಮ ದೇಶದ ಜನರ ಭಾವನೆ ವಿರೋಧಿಸಿ ಕಾಂಗ್ರೆಸ್​ನವರು ಇದೀಗ ಕಡೆಗಣನೆಗೆ ಒಳಗಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net