More

    ಬಿಜೆಪಿಯವರು ಯಾರನ್ನೂ ಕೊಲೆ ಮಾಡದಿದ್ರೆ ಸಾಕು-ಸಚಿವ ಮಂಕಾಳ ವೈದ್ಯ ಹೇಳಿಕೆ

    ಕಾರವಾರ: ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ಬಿಜೆಪಿಯವರು ಯಾರನ್ನೂ ಸಾಯಿಸದಿದ್ರೆ ಸಾಕು ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರು ಮುಖ್ಯಮಂತ್ರಿಯಿಂದ ಹಿಡಿದು ಕಾರ್ಯಕರ್ತರವರೆಗೆ ಜೀವಮಾನದಲ್ಲಿ ಸುಳ್ಳೇ ಹೇಳುವುದು. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಶಿರಸಿಗೆ ಬಂದು 100 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿ ಹೋದರು. ಆದರೆ, ಆ ಹಣ ಬಿಡುಗಡೆಯಾಗಿಲ್ಲ ಎಂದರು.

    ಹೈಕಮಾಂಡ್‌ ತೀರ್ಮಾನ

    ಈ ರಾಜ್ಯದ ಜನ ನಮಗೆ 5 ವರ್ಷ ಅಧಿಕಾರ ಕೊಟ್ಟಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇಲ್ಲಿ ಯಾರು ಏನೇ ಹೇಳಿದರೂ ಅದು ನಡೆಯುವುದಿಲ್ಲ. ನಾವು ಹೇಳುವುದೂ ಸರಿಯಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
    ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ನಾವು ಕಾಂಗ್ರೆಸ್ ಪರ. ರಾಜ್ಯ ಸರ್ಕಾರದಲ್ಲಿ ಯಾವುದೇ ಬಣವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವ ಒಪ್ಪಿಕೊಂಡು ಅವರ ಶ್ರಮ, ಸಹಕಾರದಿಂದ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು. ಇದರಿಂದ ನಾಯಕತ್ವ ಗೊಂದಲವಿಲ್ಲ ಎಂದರು.
    ಬಿಜೆಪಿಯವರು ಕೊಲೆ ಮಾಡದಿದ್ದರೆ ಸಾಕು
    ಬಿಜೆಪಿಯವರಿಗೆ ಇದುವರೆಗೆ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ಬಿಜೆಪಿಯ ಈಶ್ವರಪ್ಪ ಎಷ್ಟು ಹೊತ್ತಿಗೆ ಯಾರ ವಿರುದ್ಧ, ಏನು ಮಾಡುತ್ತಾರೆ ಗೊತ್ತಾಗದು. ಇದರಿಂದ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

    ಲವ ಕುಶ ಇದ್ದಂಗೆ

    ನಾನು ಶಾಸಕ ಸತೀಶ ಸೈಲ್‌ ಲವ-ಕುಶ ಇದ್ದಾಂಗೆ. ನಮ್ಮ ಸ್ನೇಹದಲ್ಲಿ ಎಂದು ಬದಲಾಗುವುದಿಲ್ಲ. ಆದರೆ, ಮಾಧ್ಯಮಗಳು ನಾವಿಬ್ಬರು ಸಂಗ್ಯಾ-ಬಾಳ್ಯಾ ಎಂದೆಲ್ಲ ಟೀಕಿಸುತ್ತವೆ. ಆದರೆ, ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಅಂಥವನ್ನು ಎದುರಿಸಬೇಕು ಎಂದರು.

    ಬಿಜೆಪಿಯವ್ರು ಐಆರ್‌ಬಿಗೆ ಬೆಂಬಲ ಕೊಡ್ತಿದ್ದಾರೆ

    ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಸರಿಯಾಗಿ ಆಗಿಲ್ಲ. ಜನ ಸಾಯುತ್ತಿದ್ದಾರೆ. ಆದರೆ, ಬಿಜೆಪಿಯವರು ಐಆರ್‌ಬಿ ಕಂಪನಿಗೆ ಬೆಂಬಲ ನೀಡುತ್ತಿದ್ದಾರೆ. ಏಕೆ ಎಂದು ವಿಚಾರ ಮಾಡಿದಾಗ ಕೇಂದ್ರ ಸಚಿವರು ಅದಕ್ಕೆ ಮಾಲೀಕರು ಎಂದು ನಮಗೆ ಗೊತ್ತಾಯಿತು. ಆದರೆ, ನಮ್ಮ ಕಾರ್ಯವೈಖರಿಯಲ್ಲಿ ಯಾವುದೇ ರಾಜಿ ಇಲ್ಲ.

    ಇದನ್ನೂ ಓದಿ:ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ತನ್ನಿ ಇಲ್ಲವೇ ಜಿಲ್ಲೆ ಬಿಡಲು ಸಜ್ಜಾಗಿ-ಶಿಕ್ಷಣಾಧಿಕಾರಿಗಳಿಗೆ ಸಚಿವ ವೈದ್ಯ ವಾರ್ನಿಂಗ್‌

    ಎಲ್ಲ ಕೆಲಸ ಆಗುವವರೆಗೆ ಟೋಲ್‌ ಬಂದ್‌ ಮಾಡಬೇಕು ಎಂದು ನಿರ್ಧರಿಸಿ ಒಮ್ಮೆ ಬಂದ್‌ ಮಾಡಲಾಯಿತು. ಸೋರುತ್ತಿದೆ ಎಂಬ ಕಾರಣಕ್ಕೆ ಸುರಂಗ ಬಂದ್‌ ಮಾಡಲಾಯಿತು. ಆದರೆ, ಅದಕ್ಕೆ ಬೆಂಬಲ ಸಿಕ್ಕಿಲ್ಲ. ಬಿಜೆಪಿಯವರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು. ಐಆರ್‌ಬಿಯವರು ಟೋಲ್‌ ಬಂದ್‌ ಮಾಡಬೇಕು. ಇಲ್ಲವೇ ಶೀಘ್ರ ಕೆಲಸ ಮುಗಿಸಬೇಕು ಎಂದು ಸೂಚಿಸಿದ್ದೇನೆ. ಐಆರ್‌ಬಿ ಲೂಟಿ ಮಾಡಲೆಂದೇ ಜಿಲ್ಲೆಗೆ ಬಂದಿದ್ದು. ಈ ಹಿಂದೆ ಅವರು ಗಣಿಗಾರಿಕೆ ಮಾಡಿದ ಕಲ್ಲು ಹೆಚ್ಚಾಯಿತು ಎಂದು ಕಂಪನಿ ಸರ್ಕಾರಕ್ಕೆ ನೀಡಿತ್ತು. ಈಗ ಮತ್ತೆ ಕ್ವಾರಿ ಅನುಮತಿಯನ್ನು ಕಂಪನಿ ಕೇಳುತ್ತಿದೆ.

    ಶರಾವತಿ ಸೇತುವೆ ಹೆಚ್ಚುವರಿ ಹಣ

    ಒಮ್ಮೆ ಒಂದು ರಸ್ತೆಯ ನಿರ್ಮಾಣ, ನಿರ್ವಹಣೆಯನ್ನು ಒಂದು ಕಂಪನಿಗೆ ಕೊಟ್ಟ ಮೇಲೆ ರಸ್ತೆ, ಸೇತುವೆ, ಬಸ್‌ ನಿಲ್ದಾಣ, ವಿದ್ಯುದ್ದೀಪ ಎಲ್ಲವನ್ನೂ ಮಾಡುವ ಬಗ್ಗೆ ಒಪ್ಪಂದವಾಗಿರುತ್ತದೆ. ಹಾಗೆ ಐಆರ್‌ಬಿ ಕಂಪನಿ ಎನ್‌ಎಚ್‌ಎಐ ಜತೆ 29 ವರ್ಷದ ಒಪ್ಪಂದ ಮಾಡಿಕೊಂಡಿದೆ. ಆದರೆ, ಐಆರ್‌ಬಿ ಸೇತುವೆ ನಿರ್ಮಾಣ ಮಾಡುತ್ತಿಲ್ಲ ಎಂಬ ವಿಚಾರ ಗೊತ್ತಾಗಿದೆ.

    ಈಗ ಎನ್‌ಎಸ್‌ಎಐ ಅದಕ್ಕೆ ಪ್ರತ್ಯೇಕ ಟೆಂಡರ್‌ ಕರೆದಿದೆ ಎಂಬ ಮಾಹಿತಿ ಇದೆ. ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಇಲ್ಲಿ ಅಧಿಕಾರ ದುರುಪಯೋಗ ಮಾಡಲಾಗುತ್ತಿದೆ. ಎನ್‌ಎಚ್‌ಎಐ ಹಾಗೂ ಐಆರ್‌ಬಿ ಒಪ್ಪಂದದ ಬಗ್ಗೆ ಜಿಲ್ಲಾಡಳಿತದ ಬಳಿ ಯಾವುದೇ ದಾಖಲೆ ಇಲ್ಲ. ಅದನ್ನು ಕೇಳಿದರೂ ಅವರು ಕೊಡುತ್ತಿಲ್ಲ ಎಂದು ಆರೋಪಿಸಿದರು.

    ಹಿರಿಯರ ಕಣ್ಣಿನ ಚಿಕಿತ್ಸೆ:

    ಹಿರಿಯರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲು ಜಿಲ್ಲೆಗೆ ಅನುದಾನ ಬಂದಿದೆ. ಶೀಘ್ರದಲ್ಲಿ ಆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಎಲ್ಲ ಹಿರಿಯರ ಕಣ್ಣನ ಪರೀಕ್ಷೆ ಮಾಡಿ, ಅವರಿಗೆ ಕನ್ನಡಕ ನೀಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು. ಜಿಲ್ಲೆಯ ನಾಲ್ಕು ನದಿಗಳ ಸಿಆರ್‌ಜಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಸಿಆರ್‌ಜಡ್‌ ಅನುಮತಿ ನೀಡಿದೆ. ಆದರೆ, ಮರಳು ಸಾಗಣೆಗೆ ಅನುಮತಿ ಇಲ್ಲ. ಈ ವಿಚಾರ ಹಸಿರು ನ್ಯಾಯಮಂಡಳಿಯಲ್ಲಿದೆ. ಹಾಗಾಗಿ ನಾವು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ ಎಂದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts