ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ತನ್ನಿ ಇಲ್ಲವೇ ಜಿಲ್ಲೆ ಬಿಡಲು ಸಜ್ಜಾಗಿ-ಶಿಕ್ಷಣಾಧಿಕಾರಿಗಳಿಗೆ ಸಚಿವ ವೈದ್ಯ ವಾರ್ನಿಂಗ್‌

KDP Meeting from District
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.100 ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ ದಾಖಲಾಗಬೇಕು. ಆಗದೇ ಇದ್ದಲ್ಲಿ ಡಿಡಿಪಿಐಗಳು ಜಿಲ್ಲೆ ಬಿಡಲು ಸಜ್ಜಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ವ್ಯಾಪ್ತಿಯ ಎಲ್ಲ ಹೈಸ್ಕೂಲ್‌ಗಳಿಗೆ ಡಿಡಿಪಿಐಗಳು ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಕ್ರಮ ವಹಿಸಬೇಕು ಎಂದು ಆದೇಶಿಸಿದರು. ಶಾಲೆ ನನ್ನ ಎರಡನೇ ಮನೆ ಇದ್ದಂತೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚುವಂತೆ ನೋಡಿಕೊಳ್ಳಿ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಷ್ಟು ಶಿಕ್ಷಕರು ನಿವೃತ್ತರಾಗುತ್ತಾರೆ. ಎಷ್ಟು ಅತಿಥಿ ಶಿಕ್ಷಕ ಹುದ್ದೆಗಳು ಬೇಕು ಎಂಬ ಪಟ್ಟಿ ಈಗಲೇ ಸಿದ್ಧ ಮಾಡಿ ಎಂದು ಸೂಚಿಸಿದರು.
ಶಾಲೆ ವಿಲೀನ ಮಾಡಿ
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, 10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಕಲಿಕೆಯ ವಾತಾವರಣವಿರುವುದಿಲ್ಲ. ಸಮೀಪದ ಶಾಲೆಗಳ ಜತೆ ವಿಲೀನ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಎಂದರು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 148, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 10 ಅಥವಾ ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಿವೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಡಿಡಿಪಿಐಗಳು ತಿಳಿಸಿದರು.
ಹೆಚ್ಚಿದ ಅಪೌಷ್ಠಿಕ ಮಕ್ಕಳು
ಕಳೆದ ತಿಂಗಳು ಜಿಲ್ಲೆಯಲ್ಲಿ 69 ಅಪೌಷ್ಠಿಕ ಮಕ್ಕಳಿದ್ದರು. ಈಗ ಇದ್ದಕ್ಕಿದ್ದಂತೆ ಅಪೌಷ್ಠಿಕ ಮಕ್ಕಳ ಸಂಖ್ಯೆ 1049 ಕ್ಕೆ ಏರಲು ಕಾರಣವೇನು ಎಂದು ಸಚಿವ ಮಂಕಾಳ ವೈದ್ಯ ಪ್ರಶ್ನಿಸಿದರು. ಅಪೌಷ್ಠಿಕ ಮಕ್ಕಳನ್ನು ನಿರ್ಧರಿಸುವ ಮಾನದಂಡ ಬದಲಾಗಿರುವುದು ಅದಕ್ಕೆ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಚ್.ಎಚ್.ಕಕನೂರು ತಿಳಿಸಿದರು. ಅಪೌಷ್ಠಿಕ ಮಕ್ಕಳಿಗೆ ಅಗತ್ಯ ಪೌಷ್ಠಿಕ ಆಹಾರ ಹಾಗೂ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಡಿಎಚ್‌ಒ ಅವರಿಗೆ ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ:ಹಳಿಯಾಳದ ಭಾಗವತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇಸಾಯಿ ಅವರಿಗೆ ಪಿಡಿಒ ಆಫ್‌ ದಿ ಮಂತ್‌ ಪ್ರಶಸ್ತಿ
5 ಕೆಜಿ ಹೆಚ್ಚುವರಿ ಪಡಿತರದ ಹಣ ಶೇ. 100 ಬಿಪಿಎಲ್ ಪಡಿತರದಾರರಿಗೆ ತಲುಪಬೇಕು. ಆಧಾರ ಕಾರ್ಡ್ ಸಮಸ್ಯೆ, ಬ್ಯಾಂಕ್ ಖಾತೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ಅದರ ಜವಾಬ್ದಾರಿಯನ್ನು ನ್ಯಾಯಬೆಲೆ ಅಂಗಡಿಕಾರರಿಗೆ ನೀಡಬೇಕು. ತಮ್ಮ ವ್ಯಾಪ್ತಿಯ ಎಲ್ಲ ಪಡಿತರದಾರರ ತಾಂತ್ರಿಕ ಸಮಸ್ಯೆಯನ್ನು ಅವರು ಬಗೆಹರಿಸಬೇಕು ಇಲ್ಲದಿದ್ದಲ್ಲಿ ಅವರ ಪರವಾನಗಿಯನ್ನು ರದ್ದು ಮಾಡಲು ಕ್ರಮ ವಹಿಸಿ ಎಂದು ಸಚಿವ ವೈದ್ಯ ಸೂಚನೆ ನೀಡಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ ವೇದಿಕೆಯ ಮೇಲಿದ್ದರು.


ಬಂದ್ ಆಗಿರುವ ಶಾಲೆಯ ಜಾಗ ಸಂರಕ್ಷಿಸಿ
ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 74 ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 87 ಶಾಲೆಗಳು ಇದುವರೆಗೆ ಬಂದ್ ಆಗಿದ್ದು, ಆ ಜಾಗಗಳು ಒತ್ತುವರಿಯಾಗುತ್ತಿವೆ. ಅವುಗಳನ್ನು ಕಂದಾಯ ಅಧಿಕಾರಿಗಳ ಜತೆ ಸಂಟಿ ಸರ್ವೇ ಮಾಡಿ ಕಂಪೌಂಡ್ ಹಾಕಿ ಸಂರಕ್ಷಣೆ ಮಾಡುವ ಕೆಲಸವಾಗಬೇಕು ಎಂದು ಶಾಸಕ ಸತೀಶ ಸೈಲ್ ಒತ್ತಾಯಿಸಿದರು. ಗ್ರಾಪಂ ಹಂತದಲ್ಲಿ ಸಮಿತಿಯೊಂದನ್ನು ಮಾಡಿ, ಜಾಗ ಪರಿಶೀಲಿಸಿ ಅಗತ್ಯ ಬಿದ್ದ ಬೇರೆ ಸರ್ಕಾರಿ ಇಲಾಖೆಗ ಜಾಗ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.

  • ಸಚಿವರ ಸೂಚನೆ
  • *ಜಿಲ್ಲೆಗೆ 16.88 ಕೋಟಿ ಬರ ಪರಿಹಾರ ಬಂದಿದ್ದು, ಎಲ್ಲ ರೈತರಿಗೆ ತಲುಪುವಂತೆ ನೋಡಿಕೊಳ್ಳಿ
  • *ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳು ಶೇ. 100 ರಷ್ಟು ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಿ
  • *ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವ್ಯಾಪ್ತಿಯಲ್ಲಿ ವಿದ್ಯುದ್ದೀಪ ಅಳವಡಿಸಿ, ಬಸ್ ನಿಲ್ದಾಣ ಮಾಡಿ.
  • *ಸರ್ಕಾರಿ ಮೆಡಿಕಲ್ ಕಾಲೇಜ್ ವ್ಯವಸ್ಥೆ ಸರಿ ಮಾಡುವ ಸಂಬAಧ ಅ. 8 ರಂದು ವಿಶೇಷ ಸಭೆ ನಡೆಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net