ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ತೆರಳಿದ ಸಚಿವ ಕೃಷ್ಣಭೈರೇಗೌಡ; ನಿಮ್ಮ ಸರಳತೆಗೆ ನಮ್ಮದೊಂದು ಸಲಾಂ ಸರ್ ಅಂದ್ರು ನೆಟ್ಟಿಗರು

metro
Published on

ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಸರಳ, ಸಜ್ಜನ, ನಿರಾಡಂಬರ ವ್ಯಕ್ತಿತ್ವದ ರಾಜಕಾರಣಿ ಕೃಷ್ಣಭೈರೇಗೌಡರು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ತಾವು ಮಾಡಿಕೊಂಡು ಹೋಗುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಕೃಷ್ಣಭೈರೇಗೌಡರು ಒಬ್ಬರು. ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟು ಪ್ರಾಮಾಣಿಕತೆಯಿಂದ ದುಡಿಯುವ ಇವರಿಗೆ ಜನಬೆಂಬಲ ತುಸು ಹೆಚ್ಚೇ ಇದೆ ಎಂದರೆ ತಪ್ಪಾಗಲಾರದು.

ಅಂದಹಾಗೆ ತಮ್ಮ ಸರಳತೆಯಿಂದ ಸದಾ ಸುದ್ದಿಯಲ್ಲಿರುವ ಕೃಷ್ಣಭೈರೇಗೌಡರು ಇದೀಗ ಮತ್ತೊಮ್ಮೆ ಸಿಂಪ್ಲಿಸಿಟಿಯಿಂದಲೇ ಹೈಲೆಟ್ ಆಗಿದ್ದಾರೆ. ಹೌದು, ಇಂದು (ನ 9) 'ನಮ್ಮ ಮೆಟ್ರೋ'ದಲ್ಲಿ ಕೆಂಗೇರಿಯಿಂದ ವಿಧಾನಸಭೆಗೆ ತೆರಳಿರುವ ಕೃಷ್ಣಭೈರೇಗೌಡರು, ಈ ವಿಷಯವನ್ನು ತಮ್ಮ ಅಧಿಕೃತ ಸಾಮಾಜಿಕಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಮೆಟ್ರೋ' 'ನಮ್ಮ ಊರಿನ ಭವಿಷ್ಯ'. ಇಂದು ಯಾವುದೇ ಟ್ರಾಫಿಕ್ ಇಲ್ಲದೇ ಕೆಂಗೇರಿಯಿಂದ ವಿಧಾನಸೌಧಕ್ಕೆ ಮೆಟ್ರೋದಲ್ಲಿ ತೆರಳಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್​​ಗೆ ಈಗಾಗಲೇ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ನೀವು ಬಹಳ ಸಿಂಪಲ್​​​ ಮನುಷ್ಯ, ನಿಮ್ಮ ಸರಳತೆ ಇನ್ನೊಬ್ಬರಿಗೆ ಮಾದರಿ, ನಿಮ್ಮ ಸರಳತೆಗೆ ನಮ್ಮದೊಂದು ಸಲಾಂ ಸರ್' ಎಂದೆಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಣಾಹಣಿ ಸ್ಪರ್ಧೆಯಿಂದ ಕೇವಲ ಐದು ಸಾವಿರ ಮತಗಳಿಂದ ಗೆದ್ದಿದ್ದ ಕೃಷ್ಣಭೈರೇಗೌಡರು ಈ ಬಾರಿ ಮತ್ತೊಮ್ಮೆ ನಿರಾಯಾಸವಾಗಿ ಗೆದ್ದಿದ್ದಾರೆ. ಈ ಬಾರಿ ಅವರಿಗೆ ಗೆಲುವು ಸುಲಭವಲ್ಲವೆಂದು ಅನೇಕ ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದರು. ಹಿಂದಿನ ಅವಧಿಯಲ್ಲಿ ಒಬ್ಬ ಶಾಸಕ ಕ್ಷೇತ್ರಕ್ಕೆ ಮಾಡಬಹುದಾದ ಕೆಲಸಕಾರ್ಯಗಳನ್ನು ತಮ್ಮ ಶಕ್ತ್ಯಾನುಸಾರವಾಗಿ ಮಾಡಿದ್ದಾರೆ. ಹಾಗಾಗಿ 39000 ಕ್ಕಿಂತಲೂ ಅಧಿಕ ಮತಗಳ ಗೆಲುವು ದಾಖಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net