

ಬೆಂಗಳೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕಾಯಕ ಕ್ಷೇತ್ರ, ಐಕ್ಯ ಸ್ಥಳ ಅಭಿವೃದ್ಧಿಗೆ ಎದುರಾಗಿರುವ ತಾಂತ್ರಿಕ ಅಡ್ಡಿ ನಿವಾರಣೆಗೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ತಿಪ್ಪಣ್ಣಪ್ಪ ಕಮಕನೂರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಚೌಡಯ್ಯದಾನಪುರದಲ್ಲಿ ಶ್ರೀ ಮುಕ್ತಿನಾಥೇಶ್ವರ ದೇವಾಲಯವು ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿದೆ. ಇದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ಅಧೀನದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವ್ಯಾಪ್ತಿಯಲ್ಲಿದೆ. ಈ ದೇವಾಲಯದ 15 ಮೀಟರ್ ದೂರದಲ್ಲಿ ಅಂಬಿಗರ ಚೌಡಯ್ಯ ಸಮಾಧಿ ಇದೆ. ಈ ಜಾಗವೂ ಸಹ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಪ್ರದೇಶವಾಗಿದೆ. ಹಾಗಾಗಿ, ಅಂಬಿಗರ ಚೌಡಯ್ಯ ಐಕ್ಯ ಸ್ಥಳ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದರು.
ಈ ವಿಚಾರ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ) ಗಮನಕ್ಕೆ ತರಲು ಸಮಿತಿ ರಚಿಸಿ ಶಾಸಕರು ಅಧ್ಯಕ್ಷರನ್ನಾಗಿ ಮತ್ತು ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡುತ್ತೇನೆ. 2 ತಿಂಗಳದೊಳಗೆ ನಾವೆಲ್ಲರೂ ಸೇರಿ ಎಎಸ್ಐ ಮೇಲೆ ಒತ್ತಡ ತಂದು ತಾಂತ್ರಿಕ ಸಮಸ್ಯೆ ನಿವಾರಿಸೋಣ ಎಂದು ಸಚಿವರು ತಿಳಿಸಿದರು.