ಪೊಲೀಸರಂತೆ ಸಮವಸ್ತ್ರ ಧರಿಸಿ ಫೀಲ್ಡಿಗಿಳಿಯಲಿದ್ದಾರೆ ಗಣಿ ಇಲಾಖೆ ಅಧಿಕಾರಿಗಳು

Nirani
Published on

ಬೆಂಗಳೂರು: ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇರುವಂತೆ ಇನ್ನು ಮುಂದೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಸಿಬ್ಬಂದಿಯೂ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೀಘ್ರದಲ್ಲೇ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರ ನೀಡಲಾಗುವುದು. ಗಣಿ ಅಧಿಕಾರಿಗಳಿಗೆ ಅವರ ಸ್ಥಾನಮಾನ(ಗ್ರೇಡ್​)ಕ್ಕೆ ತಕ್ಕಂತೆ ಸ್ಟಾರ್ ನೀಡಲಾಗುತ್ತದೆ. ಬೆಲ್ಟ್, ಹ್ಯಾಟ್ ಮೇಲೆ ಪ್ರತ್ಯೇಕ ಲಾಂಛನ ಇರಲಿದೆ ಎಂದರು.

ಯಾವುದೇ ಸ್ಥಳದಲ್ಲಾದರೂ ದಿಢೀರನೆ ದಾಳಿ ನಡೆಸುವಾಗ ಸಿಬ್ಬಂದಿಯನ್ನು ಕೆಲವರು ಗುರುತಿಸುವುದಿಲ್ಲ. ಕಡೇಪಕ್ಷ ಸಿಬ್ಬಂದಿಗೆ ಸಮವಸ್ತ್ರ ನೀಡಿದರೆ ಗುರುತಿಸಲು ಸುಲಭವಾಗುತ್ತದೆ, ಗಂಭೀರತೆ ಬರುತ್ತದೆ ಎಂದರು.

ಇದರ ಜತೆಗೆ ನಿವೃತ್ತ ಸೇನಾಯೋಧರನ್ನು ಇಲಾಖೆಯಲ್ಲಿ ಭದ್ರತಾ ಅಧಿಕಾರಿ (ಸೆಕ್ಯೂರಿಟಿ) ನಿಯೋಜನೆ ಮಾಡಿಕೊಳ್ಳುವ ಚಿಂತನೆ ಇದೆ. ಹೊರಗುತ್ತಿಗೆ ಆಧಾರದ ಮೇಲೆ ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು ಸೇರಿ ಪ್ರತಿಜಿಲ್ಲೆಗೆ ಐವರು ಭದ್ರತಾ ಸಿಬ್ಬಂದಿ ನೇಮಕ ಮಾಡುವುದು ಮತ್ತು ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net