

ಹಿರಿಯ ನಟ ಮತ್ತು ಖ್ಯಾತ ಮಿಮಿಕ್ರಿ ಪಟು ರಾಜಗೋಪಾಲ್ ಇಂದು ನಿಧನರಾಗಿದ್ದಾರೆ. 69 ವರ್ಷ ವಯಸ್ಸಿನ ರಾಜಗೋಪಾಲ್ ಅವರು ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಗಳಿಂದ ಕಳೆದ ಕೆಲವು ವರ್ಷಗಳಿಂದ ಬಳಲುತ್ತಿದ್ದರು.
ಇದನ್ನೂ ಓದಿ: ಆ್ಯಪ್ನಲ್ಲಿ ಬಿಡುಗಡೆಯಾಗುತ್ತಾ ‘ಆರ್.ಆರ್.ಆರ್’?
ರಾಜಗೋಪಾಲ್ ಅವರು ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರ ಅನುಕರಣೆ ಮಾಡುತ್ತಿದ್ದರು. ಎನ್.ಎಸ್. ರಾವ್, ದಿನೇಶ್, ಶಂಕರ್ ನಾಗ್ ಸೇರಿದಂತೆ ಹಲವು ಕಲಾವಿದರ ಮಿಮಿಕ್ರಿ ಮಾಡಿ ಜನಪ್ರಿಯರಾಗಿದ್ದರು. ಆದರ, ಇದೆಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಜನಪ್ರಿಯತೆ ಸಿಕ್ಕಿದ್ದು, ದಿವಂಗತ ನಟಿ ಕಲ್ಪನಾ ಅವರನ್ನು ಮಿಮಿಕ್ರಿ ಮಾಡಿದ್ದಿಕ್ಕೆ.
ಕನ್ನಡ ಚಿತ್ರರಂಗದ ನಟರನ್ನು ಮಿಮಿಕ್ರಿ ಮಾಡುವವರು ಬಹಳಷ್ಟು ಜನ ಇದ್ದಾರೆ. ಆದರೆ, ಒಬ್ಬ ನಟಿಯನ್ನು ಮಿಮಿಕ್ರಿ ಮಾಡಿದವರು ಬಹಳ ಕಡಿಮೆ. ಯಾರೂ ಅಂಥದ್ದೊಂದು ಪ್ರಯತ್ನ ಮಾಡದಿರುವ ಸಂದರ್ಭದಲ್ಲಿ, ನಟಿ ಕಲ್ಪನಾ ಅವರ ಮಿಮಿಕ್ರಿ ಮಾಡಿ ದೊಡ್ಡ ಹೆಸರು ಮಾಡಿದವರು ರಾಜಗೋಪಾಲ್. ಕಲ್ಪನಾ ಅವರನ್ನು ಅನುಕರಣೆ ಮಾಡಿ ಅವರು ಜನಪ್ರಿಯರಾಗಿದ್ದಷ್ಟೇ ಅಲ್ಲ, ಕನ್ನಡಿಗರ ನೆನಪಿನಿಂದ ಮರೆಯಾಗುತ್ತಿದ್ದ 'ಮಿನುಗುತಾರೆ'ಯನ್ನು ತಮ್ಮ ವಿಶಿಷ್ಟ ಧ್ವನಿ ಮತ್ತು ಹಾವ-ಭಾವಗಳಿಂದ ಜೀವಂತವಾಗಿಸಿದ್ದರು ಅವರು.
80-90ರ ದಶಕಗಳಲ್ಲಿ ಆರ್ಕೆಸ್ಟ್ರಾಗಳು ಉಚ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಹಲವು ಆರ್ಕೆಸ್ಟ್ರಾಗಳಲ್ಲಿ ಕರ್ನಾಟಕದ ಮೂಲೆಮೂಲೆ ಸುತ್ತಿ ತಮ್ಮ ಮಿಮಿಕ್ರಿಯ ಮೂಲಕ ಜನರನ್ನು ಮನರಂಜಿಸಿದ್ದರು ರಾಜಗೋಪಾಲ್. ಆರ್ಕೆಸ್ಟ್ರಾಗಳಲ್ಲಿ ಬೇರೆಯವರ ಮಿಮಿಕ್ರಿ ಮಾಡುವುದರ ಜತೆಗೆ, ಹಲವು ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಸಹ ಅವರು ನಟಿಸಿದ್ದರು. ಇನ್ನು ಕೆಲವು ರಂಗತಂಡಗಳೊಂದಿಗೆ ಗುರುತಿಸಿಕೊಂಡಿದ್ದ ಅವರು, ಕೆಲವು ನಗೆನಾಟಕಗಳಲ್ಲೂ ಅಭಿನಯಿಸಿದ್ದರು.
ಇದನ್ನೂ ಓದಿ: ಕನ್ನಡವನ್ನು ತಪ್ಪಾಗಿ ಬರೆದ ನಿರ್ದೇಶಕ ಯೋಗರಾಜ್ ಭಟ್
ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಜಗೋಪಾಲ್, ಕಳೆದ ವರ್ಷ ಶುರುವಾದ 'ಕಾಫಿ ಕಟ್ಟೆ' ಎಂಬ ಚಿತ್ರದಲ್ಲಿ ನಟಿಸಿದ್ದರು.