

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಈಗ ಹನ್ನೊಂದು ವರ್ಷ. ಐದು ವರ್ಷಗಳ ಎರಡು ಪೂರ್ಣಾವಧಿಯ ಬಳಿಕ, ಮೂರನೇ ಅವಧಿಯ ಮೊದಲನೇ ವರ್ಷವನ್ನು ಮೋದಿ ಪೂರ್ಣಗೊಳಿಸಿದ್ದಾರೆ. ರಾಜಕೀಯದ ಆರೋಪಗಳು ಏನೇ ಇದ್ದರೂ ಈ ಅವಧಿಯಲ್ಲಿ ಭಾರತದ ವಿಶ್ವಾಸ ಬಲಾಢ್ಯಗೊಂಡಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ, ಭಾರತದ ದನಿಗೆ ಮನ್ನಣೆ ಸಿಗುತ್ತಿದೆ ಎಂಬುದು ನಿಸ್ಸಂಶಯ. ಉತ್ಪಾದನೆ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದವರೆಗೆ ಭಾರತ ಸಾಧಿಸಿರುವ ಸಾಧನೆ ಅಸಾಧಾರಣ.
ದೇಶಕ್ಕೆ ಸಮರ್ಥ ನಾಯಕತ್ವ, ದೃಢ ಸಂಕಲ್ಪ, ಗುರಿಯನ್ನು ಸಾಧಿಸುವ ಛಲ, ಹೊಸ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ತುಡಿತ, ರಾಷ್ಟ್ರ ಮೊದಲು ಎಂಬ ಬದ್ಧತೆ ಇದ್ದಲ್ಲಿ ಮಾತ್ರ ಸುಧಾರಣೆಯ ಹೊಸ ಮೈಲಿಗಲ್ಲುಗಳನ್ನು ತಲುಪಲು ಸಾಧ್ಯ. ಕಳೆದ 11 ವರ್ಷಗಳಲ್ಲಿ ಅದು ಸಾಧ್ಯವಾಗಿದೆ ಎಂಬುದು ಸಂತಸದ ಸಂಗತಿ. ಹಾಗಾಗಿಯೇ, ಹಲವು ದೇಶಗಳು ಮೋದಿಯವರಿಗೆ ಅತ್ಯುನ್ನತ ಪುರಸ್ಕಾರವನ್ನು ನೀಡಿ, ಅವರ ನಾಯಕತ್ವ ಗುಣವನ್ನು ಪ್ರಶಂಸಿಸಿವೆ.
ಸಾಮಾನ್ಯವಾಗಿ ಅಧಿಕಾರದ ಒಂದು ಅವಧಿಯ ನಂತರವೇ ಆಡಳಿತವಿರೋಧಿ ಅಲೆ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ, ಎರಡು ಅವಧಿ ಪೂರೈಸಿ, ಮೂರನೇ ಅವಧಿಯಲ್ಲೂ ಮೋದಿಯವರ ವರ್ಚಸ್ಸು, ಜನಪ್ರಿಯತೆ ಹೆಚ್ಚುತ್ತಿದೆ ಎಂಬುದು ಗಮನಾರ್ಹ. ‘ಕಳೆದ ಐದು ದಶಕಗಳಿಂದ ನನ್ನ ಜೀವನವನ್ನು ದೇಶಸೇವೆಗಾಗಿ, ಜನರ ಸೇವೆಗಾಗಿ ಮೀಸಲಿಟ್ಟಿದ್ದೇನೆ. ಕಳೆದ 23 ವರ್ಷಗಳಿಂದ ಮೊದಲು ಮುಖ್ಯಮಂತ್ರಿಯಾಗಿ, ಈಗ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬಡವರು, ರೈತರು, ಮಹಿಳೆಯರು ಮತ್ತು ಯುವಕರು- ಈ ನಾಲ್ಕು ಜಾತಿಗಳ ಸಬಲೀಕರಣವಾಗಬೇಕು. ಆಗ ಪ್ರತಿಯೊಂದು ಕ್ಷೇತ್ರ ಮತ್ತು ವರ್ಗದ ಸಾಮರ್ಥ್ಯ ಹೆಚ್ಚುವುದು’ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿರುವ ಮೋದಿ ಇದೇ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಅಷ್ಟಕ್ಕೂ ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲು ಸಕಾರಾತ್ಮಕ ರಾಜಕಾರಣ ಅಗತ್ಯ. ಆದರೆ, ಕೆಲ ರಾಜ್ಯಗಳು ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸದೆ ಜನರನ್ನು ಸೌಲಭ್ಯಗಳಿಂದ ವಂಚಿತ ಮಾಡುತ್ತಿರುವುದು ಸರಿಯಲ್ಲ. ಕೇಂದ್ರಕ್ಕೆ ಅನುದಾನಕ್ಕಾಗಿ ಬೇಡಿಕೆ ಇಡುವ, ಹೋರಾಟ ಮಾಡುವ ರಾಜ್ಯಗಳು ಯೋಜನೆಗಳ ಜಾರಿಯಲ್ಲೂ ಇದೇ ಬದ್ಧತೆ ತೋರಿಸುವುದು ಅಗತ್ಯ. ಅಲ್ಲದೆ, ಇಡೀ ರಾಷ್ಟ್ರದ ಹಿತಕ್ಕೆ ಅನ್ವಯವಾಗುವ ಮಹತ್ವದ ಯೋಜನೆ, ಸುಧಾರಣೆಗಳನ್ನು ಕೇಂದ್ರ ಘೋಷಿಸಿದಾಗ, ಅವುಗಳ ಜಾರಿಯ ವಿಷಯದಲ್ಲಿ ರಾಜ್ಯ ಸರ್ಕಾರಗಳು ರಾಜಕೀಯ ಮಾಡಬಾರದು. ರಾಜ್ಯಗಳ ಸಹಕಾರದಿಂದ ಕೇಂದ್ರ ಕೂಡ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ದೇಶ ಸಕಾರಾತ್ಮಕ ರಾಜನೀತಿಗೆ ಮಾದರಿಯಾಗಲಿ ಎಂದು ಆಶಿಸೋಣ.