

ಬೆಂಗಳೂರು: ಅನೀಶ್ಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಆದರೆ, ಅನೀಶ್ ಆಗಲೀ, ನಿರ್ದೇಶಕ ಅಭಿಷೇಕ್ ಶೆಟ್ಟ ಆಗಲೀ ನಾಯಕಿ ಯಾರಾಗಬಹುದೆಂಬ ರಹಸ್ಯವನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರತಂಡದವರಿಂದಲೇ ನಾಯಕಿಯ ಬಗ್ಗೆ ಅಧಿಕೃತವಾಗಿ ಹೊರಬಿದ್ದಿದೆ.
‘ಆರಾಮ್ ಅರವಿಂದ್ ಸ್ವಾಮಿ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ಗೆ ನಾಯಕಿಯಾಗಿ ಮಿಲನಾ ನಾಗರಾಜ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಸಹ ನಡೆದಿದೆ. ಮಲಯಾಳಿ ಟೀಚರ್ ಆಗಿ ಮಿಲನಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.
ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’ ಮತ್ತು ‘ಗಜಾನನ ಅಂಡ್ ಗ್ಯಾಂಗ್’ ಚಿತ್ರಗಳನ್ನು ನಿರ್ದೇಶಿಸಿದ್ದ ಅಭಿಷೇಕ್ ಶೆಟ್ಟಿ, ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ಅವರದ್ದೇ. ಈ ಹಿಂದೆ 'ಅಕಿರ' ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ, 'ಗುಳ್ಟು' ನಿರ್ಮಿಸಿದ್ದ ಪ್ರಶಾಂತ್ ರೆಡ್ಡಿ, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈಗಾಗಲೇ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಎರಡನೆಯ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯದಲ್ಲೇ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆಯಂತೆ.