ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ ಏರಿಕೆ; ಯಾವ ತಂಡ ಶ್ರೀಮಂತ? ಆರ್​ಸಿಬಿ ಎಷ್ಟನೇ ಸ್ಥಾನದಲ್ಲಿದೆ?

ipl teams web
Published on

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಎನಿಸಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) ಬ್ರಾಂಡ್​ ಮೌಲ್ಯ 2023ರಲ್ಲಿ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂಪಾಯಿ ತಲುಪಿದೆ. ಇದರೊಂದಿಗೆ ತಂಡಗಳ ಬ್ರಾಂಡ್​ ಮೌಲ್ಯ ಕೂಡ ಉತ್ತಮ ಪ್ರಗತಿ ಕಂಡಿದೆ. ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗರಿಷ್ಠ 725 ಕೋಟಿ ರೂ. (87 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿರುವ ಐಪಿಎಲ್​ ತಂಡವೆನಿಸಿದೆ.

ಮತ್ತೊಂದು 5 ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡ 675 ಕೋಟಿ ರೂ. (81 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿದೆ. ಕೋಲ್ಕತ ನೈಟ್​ರೈಡರ್ಸ್​ ತಂಡ 655 ಕೋಟಿ ರೂ. (78.6 ದಶಲಕ್ಷ ಡಾಲರ್​) ಮತ್ತು ಆರ್​ಸಿಬಿ ತಂಡ 582 ಕೋಟಿ ರೂ. (69.8 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದೆ. ಇದುವರೆಗೆ ಐಪಿಎಲ್​ ಟ್ರೋಫಿ ಗೆಲ್ಲದಿರುವ ತಂಡಗಳ ಪೈಕಿ ಆರ್​ಸಿಬಿ ಗರಿಷ್ಠ ಮೌಲ್ಯ ಹೊಂದಿದೆ.

2022ರ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ತಂಡ 2023ರಲ್ಲಿ ರನ್ನರ್​ಅಪ್​ ಸ್ಥಾನದ ನಡುವೆ 545 ಕೋಟಿ ರೂ. (65.4 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ ಶೇ. 38 ಪ್ರಗತಿ ಕಂಡು 5ನೇ ಸ್ಥಾನಕ್ಕೇರಿದೆ. ಲಖನೌ ಸೂಪರ್​ಜೈಂಟ್ಸ್​ ತಂಡ 392 ಕೋಟಿ ರೂ. (47 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದೆ. ಎಲ್​ಎಸ್​ಜಿ ಬ್ರಾಂಡ್​ ಮೌಲ್ಯ ಗರಿಷ್ಠ ಶೇ. 48 ಪ್ರಗತಿ ಕಂಡಿದೆ.

ಬ್ರಾಂಡ್​ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ "ಬ್ರಾಂಡ್​ ಫಿನಾನ್ಸ್​ ರಿವೀಲ್ಸ್​' ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್​ ಬ್ರಾಂಡ್​ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ. 2022ರಲ್ಲಿ ಐಪಿಎಲ್​ 70,070 ಕೋಟಿ ರೂ. (8.4 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿತ್ತು.

ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ

ಮುಂಬೈ ಇಂಡಿಯನ್ಸ್​: 725 ಕೋಟಿ ರೂ.

ಚೆನ್ನೈ ಸೂಪರ್​ಕಿಂಗ್ಸ್​: 675 ಕೋಟಿ ರೂ.

ಕೋಲ್ಕತ ನೈಟ್​ರೈಡರ್ಸ್​: 655 ಕೋಟಿ ರೂ.

ಆರ್​ಸಿಬಿ (ಬೆಂಗಳೂರು): 582 ಕೋಟಿ ರೂ.

ಗುಜರಾತ್​ ಟೈಟಾನ್ಸ್​: 545 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್​: 534 ಕೋಟಿ ರೂ.

ರಾಜಸ್ಥಾನ ರಾಯಲ್ಸ್​: 521 ಕೋಟಿ ರೂ.

ಸನ್​ರೈಸರ್ಸ್​ ಹೈದರಾಬಾದ್​: 402 ಕೋಟಿ ರೂ.

ಲಖನೌ ಸೂಪರ್​ಜೈಂಟ್ಸ್​: 392 ಕೋಟಿ ರೂ.

ಪಂಜಾಬ್​ ಕಿಂಗ್ಸ್​: 377 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net