

ಬೆಂಗಳೂರು: ನಾಗವಾರ ಬಳಿ ರಸ್ತೆ ಮೇಲೆ 'ನಮ್ಮ ಮೆಟ್ರೋ' ಪಿಲ್ಲರ್ ಕುಸಿದು ದುರ್ಘಟನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ಎಂಡಿ ಅಜುಂ ಪರ್ವೇಜ್, ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮೃತ ಕುಟುಂಬಕ್ಕೆ ಪರಿಹಾರ ಎಷ್ಟು ಕೊಟ್ರೂ ಸಾಕಾಗಲ್ಲ. ಎರಡು ಅಮಾಯಕ ಜೀವಗಳು ಬಲಿಯಾಗಿದ್ದು ದುರಂತ. ನಮ್ಮ ಇಂಜಿನಿಯರ್ ಜತೆ ಮಾತಾಡಿದ್ದೇವೆ. IISC ಅನಾಲಿಸಿಸ್ ಮಾಡುತ್ತದೆ. ಕಂಟ್ರ್ಯಾಕ್ಟರ್ಗೆ ನೋಟಿಸ್ ನೀಡಲಾಗಿದೆ. 18ರಿಂದ 20 ಮೀಟರ್ ಉದ್ದದ ಪಿಲ್ಲರ್ನಿಂದ ಅಪಘಾತ ಆಗಿದೆ. ಎರಡ್ಮೂರು ದಿನ ಇಲ್ಲಿ ಕೆಲಸ ಮಾಡೋದಿಲ್ಲ. ಮಾನ್ಯುಯಲ್ ಮಿಸ್ಟೇಕ್ ಯಾರ ಕಡೆಯಿುದ ಆಗಿದೆ ಎಂದು IISC ವರದಿ ಬಂದ ನಂತರ ಗೊತ್ತಾಗುತ್ತೆ. ತಾಂತ್ರಿಕ ವಿಚಾರಗಳನ್ನೂ ಪರಿಗಣಿಸಲಾಗುತ್ತೆ ಎಂದರು.
ಇನ್ನು ಮೆಟ್ರೋ ಪಿಲ್ಲರ್ ಕುಸಿದು ಇಬ್ಬರು ಮೃತಪಟ್ಟ ಹಿನ್ನೆಲೆ ನಿರ್ಲಕ್ಷ್ಯದ ಆರೋಪದಡಿ BMRCL ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಮೂಲದ ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ದಂಪತಿ ಇಬ್ಬರೂ ಬೆಂಗಳೂರಿನಲ್ಲಿ 10 ವರ್ಷಗಳಿಂದ ವಾಸವಿದ್ದರು. ಇಬ್ಬರೂ ಸಿವಿಲ್ ಇಂಜಿನಿಯರ್ ಆಗಿದ್ದರು. ಮಕ್ಕಳಿಬ್ಬರನ್ನೂ ಬೇಬಿ ಸಿಟ್ಟಿಂಗ್ಗೆ ಬಿಟ್ಟು, ಪತ್ನಿಯನ್ನ ಕಂಪನಿ ಬಳಿ ಡ್ರಾಪ್ ಮಾಡಿ ಬಳಿ ತಾನೂ ಕೆಲಸಕ್ಕೆ ಹೋಗಲೆಂದು ಪತ್ನಿ-ಮಕ್ಕಳನ್ನು ಬೈಕ್ನಲ್ಲಿ ಲೋಹಿತ್ ಕರೆದುಕೊಂಡು ಇಂದು(ಮಂಗಳವಾರ) ಬೆಳಗ್ಗೆ ಹೋಗುತ್ತಿದ್ದರು. ದುರಾದೃಷ್ಟವಶಾತ್ ಚಲಿಸುತ್ತಿದ್ದ ಬೈಕ್ ಮೇಲೆ 10.30ರ ಸುಮಾರಿಗೆ ಮೆಟ್ರೋ ಪಿಲ್ಲರ್ ಕುಸಿದಿದ್ದು, ನಾಲ್ವರೂ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಇವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ಮೃತಪಟ್ಟಿದ್ದಾರೆ. ಲೋಹಿತ್ ಮತ್ತು ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಅತ್ತ ತಾಯಿ-ಮಗು ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.