

ಬೆಂಗಳೂರು: ಪ್ರಯಾಣ ದರ ಏರಿಕೆ ಮೂಲಕ ಲಾಭವನ್ನೇ ಲಕ್ಷ್ಯವಾಗಿಸಿ ನಡೆಯುತ್ತಿರುವ ಬೆಂಗಳೂರು ಮೆಟ್ರೋ (Metro) ರೈಲು ನಿಗಮ ನಿಯಮಿತ (BMRCl) ವಿರುದ್ಧ ಜನಾಕ್ರೋಶ ವ್ಯಕ್ತವಾದ ಬಳಿಕ, ಕೆಲ ನಿಲ್ದಾಣದವರೆಗೆ ವಿಧಿಸಿದ್ದ ಅಸಹಜ ದರದಲ್ಲಿ ಶೇ.30 ಇಳಿಕೆ ಮಾಡಲಾಗಿದೆ. ಆದರೆ, ಈ ಪರಿಷ್ಕರಣೆ ಕೆಲ ಸ್ಟೇಜ್ಗಳಿಗೆ ಅನ್ವಯಿಸಿರುವುದನ್ನು ಎಲ್ಲ ಹಂತಗಳಿಗೂ ವಿಸ್ತರಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪರಿಷ್ಕೃತ ದರದಿಂದ ಸರಾಸರಿ 7.2 ಲಕ್ಷ ಪ್ರಯಾಣಿಕರಲ್ಲಿ 2.5 ಲಕ್ಷ ಮಂದಿಗಷ್ಟೇ ಅಲ್ಪ ಕಡಿಮೆ ದರ ಸಿಗುತ್ತಿದೆ. ಉಳಿದ ಶೇ.70 ಮಂದಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮೆಟ್ರೋ ವಿಸ್ತರಣೆ, ನಿರ್ವಹಣಾ ವೆಚ್ಚ, 10,422 ಕೋಟಿ ರೂ. ಸಾಲ ಬಾಧ್ಯತೆ, ಶೇ.42 ಸಿಬ್ಬಂದಿ ವೇತನಗಳು ಅಧಿಕ ಹೀಗೆ ದರ ಏರಿಕೆಗೆ ಹತ್ತಾರು ಕಾರಣಗಳನ್ನು ಮುಂದಿಟ್ಟ ಬಿಎಂಆರ್ಸಿಎಲ್ ಇತ್ತೀಚೆಗೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ‘ನಮ್ಮ ಮೆಟ್ರೋ ನಷ್ಟದಲ್ಲಿ ಓಡುತ್ತಿದೆ, ಪರಿಷ್ಕರಣೆ ಅನಿವಾರ್ಯ’ ಎಂಬ ಹೇಳಿಕೆಯನ್ನೂ ನೀಡಿದೆ.
ನಮ್ಮ ಮೆಟ್ರೋಕ್ಕಿಂತ (Namma Metro) ಕಡಿಮೆ ಸಂಪರ್ಕ ಜಾಲವಿರುವ ಕೋಲ್ಕತ್ತಾ, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ, ಜೈಪುರದಲ್ಲಿ 0-2 ಕಿಮೀ ಸಂಚಾರಕ್ಕೆ 5-10 ರೂ. ಸರಾಸರಿ ಪ್ರಯಾಣ ದರ ಇದೆ. ಬಿಎಂಆರ್ಸಿಎಲ್ ಕೂಡ ಕನಿಷ್ಠ ಪ್ರಯಾಣ ದರವನ್ನು 10 ರೂ.ಗೆ ಇಳಿಸಿದೆ. ಆದರೆ, ಕಡಿಮೆ ಸಂಪರ್ಕ ಜಾಲವಿರುವ ಇತರ ನಗರಗಳಲ್ಲಿ ಗರಿಷ್ಠ ಪ್ರಯಾಣ ದರ 20-30 ಕಿಮೀ ಸಂಚಾರಕ್ಕೆ ಸರಾಸರಿ 50 ರೂ. ಇದ್ದರೆ, ಬೆಂಗಳೂರಲ್ಲಿ ಮಾತ್ರ 25 ಕಿಮೀಕ್ಕಿಂತ ಅಧಿಕ ಪ್ರಯಾಣಕ್ಕೆ 90 ರೂ. ನಿಗದಿ ಮಾಡಲಾಗಿದೆ. ಕಿಮೀ, ನಿಲ್ದಾಣಗಳಿಗೆ ಅನುಗುಣವಾಗಿ ಹಂತ ಹಂತಗಳಲ್ಲಿ ದುಪ್ಪಟ್ಟಾಗಿರರುವುದನ್ನು ಕಡಿಮೆಗೊಳಿಸುತ್ತೇವೆ ಎಂದು ನಿಗಮವು ಭರವಸೆ ನೀಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.
ದೆಹಲಿ ಮೆಟ್ರೋಗೆ ಹೋಲಿಕೆ ಬೇಡ: ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿಎಂಆರ್ಸಿ) 2017ರಲ್ಲಿ ಇದೇ ರೀತಿ 8 ವರ್ಷಗಳ ನಂತರ ಮೆಟ್ರೋ ಪ್ರಯಾಣ ದರದಲ್ಲಿ ಗಣನೀಯ ಹೆಚ್ಚಳ ಮಾಡಿತ್ತು. ಅದನ್ನು ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗೆ ಹೋಲಿಸುವುದು ಸರಿಯಲ್ಲ ಎಂಬುದು ಬಿಎಂಆರ್ಸಿಎಲ್ ವಾದ. ಆದರೆ, 395 ಕಿಮೀ ಸಂಪರ್ಕ ಜಾಲವಿರುವ ದೆಹಲಿ ಮೆಟ್ರೋ ‘ನಮ್ಮ ಮೆಟ್ರೋ’ಕ್ಕಿಂತ 4 ಪಟ್ಟು ಹೆಚ್ಚು ವಿಸ್ತರಣಾ ಜಾಲ ಹೊಂದಿದೆ. ಅಲ್ಲಿನ ನಿರ್ವಹಣೆ ವೆಚ್ಚ, ವೇತನ ವೆಚ್ಚ, ಇಂಧನ ವೆಚ್ಚ, ಸಾಮಾಗ್ರಿ ವೆಚ್ಚ ಪ್ರತಿವರ್ಷ ಹೆಚ್ಚುತ್ತಿರುವ ಆಧಾರದ ಮೇಲೆಯೇ ದರ ಏರಿಕೆ ಮಾಡುವುದಾದರೆ ಅಲ್ಲಿನ ಪ್ರಯಾಣ ದರ ಏರಿಕೆಯ ಚಿತ್ರವನ್ನು ಜನರು ತಡೆಕೊಳ್ಳುವ ಸಾಧ್ಯವೇ ಇಲ್ಲ. ಬೆಂಗಳೂರು ನಗರವಾಸಿಗಳ ಪ್ರಮುಖ ಸಂಚಾರ ಸೌಲಭ್ಯ ಎಂದು ಜನಜನಿತವಾಗಿ ‘ನಮ್ಮ ಮೆಟ್ರೋ’ ಸಂಚಾರ ಸಿಕ್ಕಿನ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆದರೆ, ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಸಂಚಾರ ಸೌಲಭ್ಯ ನೀಡಲು ನಿಗಮವು ಮನಸ್ಸು ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಪರಿಷ್ಕೃತ ದರ ಜಾರಿ: ಅಸಹಜ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ, ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ದರ ನಿಗದಿಪಡಿಸಲು ಸಿಎಂ ಸಿದ್ದರಾಮಯ್ಯ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪರಿಷ್ಕೃತ ಪ್ರಯಾಣ ದರ ಗರಿಷ್ಠ ಶೇ.70ಕ್ಕಿಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಫೆ.14 (ಶುಕ್ರವಾರ) ಯಶವಂತಪುರ ನಿಲ್ದಾಣದಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಹಿಂದೆ 25ರಿಂದ 50ರೂ.ಗೆ ಏರಿಕೆಯಾಗಿತ್ತು ಅಂದರೆ ಶೇ.100 ಹೆಚ್ಚಳವಿತ್ತು. ಅದೀಗ 25 ರೂ.ನಿಂದ 40 ರೂ.ಗೆ ಇಳಿಕೆ ಕಂಡಿದೆ. (ದರ ಹೆಚ್ಚಳ ಶೇ.90ರಿಂದ 60ಕ್ಕೆ ಇಳಿಕೆ). ಪುನರ್ ಪರಿಷ್ಕರಣೆಯಿಂದ ಇಲ್ಲಿ ಕೇವಲ 10 ರೂ. ವ್ಯತ್ಯಾಸ ಕಂಡುಬಂದಿದ್ದು, ಇದು ಕಿಮೀ, ನಿಲ್ದಾಣದ ಆಧಾರದಲ್ಲಿ ಹಲವು ಹಂತದಲ್ಲೂ ವ್ಯತ್ಯಯವಾಗಲಿದೆ.