

ಬಂಟ್ವಾಳ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯಿಂದ ಬಂಟ್ವಾಳ ನಂ.1, 2 ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳದ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಹವಾಲು ಆಲಿಸಿದರು. ಬಂಟ್ವಾಳ ಎಕ್ಸಿಕ್ಯುಟಿವ್ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ನಾರಾಯಣ ಭಟ್ ಮತ್ತು ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದು, ಅಹವಾಲುಗಳನ್ನು ಆಲಿಸಿದರು. ಸ್ಥಳದಲ್ಲಿ 12ಕ್ಕೂ ಅಧಿಕ ದೂರುಗಳು ಬಂದರೆ, ದೂರವಾಣಿ ಮೂಲಕವೂ ಅಹವಾಲುಗಳನ್ನು ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಕೃಷ್ಣರಾಜ್, ಗ್ರಾಹಕರು ಇಪ್ಪತ್ತು ರೂ.ಗಳಿಗೆ ಬೇಕಾಗಿ ಕಚೇರಿಗೆ ಬರಬೇಕು ಎಂದಿಲ್ಲ. ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿಕೊಳ್ಳಿ. ಕ್ಯೂಆರ್ ಕೋಡ್ ಉಪಯೋಗಿಸಿಕೊಳ್ಳಿ ಎಂದರು.
ಸಜೀಪ ಮೂಡ ಗ್ರಾ.ಪಂ. ಸದಸ್ಯ ಅಬ್ದುಲ್ ಕರೀಂ, ಅಮ್ಮುಂಜೆ ಗ್ರಾ.ಪಂ. ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ನಾವೂರಿನ ಸುನೀಲ್ ಲೋಬೊ, ಸಮದ್, ಸ್ಟ್ಯಾನಿ ಜೆರಾಲ್ಡ್ ಸಿಕ್ವೇರಾ ಮತ್ತಿತರರು ವಿಚಾರ ಮಂಡಿಸಿದರು.
ಹಲವು ಸಮಸ್ಯೆಗಳ ಪ್ರಸ್ತಾಪ
ಪವರ್ ವ್ಯಾನ್ ಕೆಲಸದ ವೈಖರಿ, ಪವರ್ ಮ್ಯಾನ್ಗಳಿಗೆ ಲ್ಯಾಡರ್ ಒದಗಿಸುವ ಕುರಿತು, ಹಳೆಯದಾದ ವಿದ್ಯುತ್ ತಂತಿಗಳು, ಸಣ್ಣ ಗಾಳಿಗೂ ಕರೆಂಟ್ ಹೋಗುವ ವಿಚಾರ ಮತ್ತು ಮೀಟರ್ ರೀಡರ್ ಸಮಯಕ್ಕೆ ಸರಿಯಾಗಿ ಬಾರದ ವಿಚಾರ ಸಹಿತ ಅಧಿಕಾರಿಗಳ ಸ್ಪಂದನೆ ಹಾಗೂ ಐಪಿ ಸೆಟ್ಗೆ ವಿದ್ಯುತ್ ಒದಗಿಸುವ ಬಗ್ಗೆ ಹಲವರು ಅಹವಾಲು ಮಂಡಿಸಿದರು.