'ಮನಸು ಭಾರವಾದಾಗ ಹಾರುವುದೆಂತೋ ... ಸುಚೇತನ್​ ಕಂಠಸಿರಿಯಲ್ಲಿ ಮನಸಿನ ಹಾಡು

Suchetan - Final
Published on

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸರಿಗಮಪ' ಕಾರ್ಯಕ್ರಮದಲ್ಲಿ ನೀವು ಇವರನ್ನು ಆಗಾಗ ನೋಡಿರಲಿಕ್ಕೇ ಬೇಕು. ಎಲ್ಲಾ ಸೀಸನ್​ಗಳ ಕಂಟೆಸ್ಟೆಂಟ್​ಗಳಿಗೆ ಮೆಂಟರ್​ ಆಗಿ, ಅವರನ್ನು ತಿದ್ದುವ ಡಾ. ಸುಚೇತನ್​ ರಂಗಸ್ವಾಮಿ, ಈಗ 'ಮನಸು' ಎಂಬ ಹೊಸ ವಿಡಿಯೋ ಆಲ್ಬಂ ಮಾಡಿದ್ದಾರೆ.

'ಮನಸು ಭಾರವಾದಾಗ ಹಾರುವುದೆಂತೋ, ಕನಸು ಮೂಕವಾದಾಗ ಮಲಗುವುದೆಂತೋ ...' ಎಂಬ ಹಾಡನ್ನು ಬರೆದಿರುವುದಷ್ಟೇ ಅಲ್ಲ, ಈ ಹಾಡನ್ನು ಅವರೇ ಹಾಡಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

'ಮನಸು ಭಾರವಾದಾಗ ಹಾರುವುದೆಂತೋ, ಕನಸು ಮೂಕವಾದಾಗ ಮಲಗುವುದೆಂತೋ ...' ಎಂಬ ಸಾಲುಗಳೇ ಹೇಳಿದಂತೆ ಮನಸ್ಸಿನ ತಳಮಳಗಳನ್ನು ಅವರು ಈ ಹಾಡಿನ ಮೂಲಕ ಅದ್ಭುತವಾಗಿ ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಈ 'ಮನಸು' ಹಾಡಿನ ವಿಡಿಯೋ ಇಡೀಗ ಯೂಟ್ಯೂಬ್​ನ ಹೈದ ಸ್ಟುಡಿಯೋಸ್​ ಚಾನಲ್​ನಲ್ಲಿ ಇದೀಗ ಬಿಡುಗಡೆಯಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚುಹೆಚ್ಚು ಜನಪ್ರಿಯವಾಗುತ್ತಿದೆ. ಈ ಹಾಡಿನಲ್ಲಿ ಸುಚೇತನ್​ ಅವರ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆಯ ಜತೆಗೆ ಗಮನಸೆಳೆಯುವ ಇನ್ನೊಂದು ಅಂಶವೆಂದರೆ, ಅದು ಅರುಣ್​ ಕುಮಾರ್​ ಅವರ ಡ್ರಮ್ಸ್​.

ಈ 'ಮನಸು' ಆಲ್ಬಂಗೆ ಸಂಗೀತ ಸಂಯೋಜಿಸಿರುವುದು ಕೀರ್ತನ್​ ಹೊಳ್ಳ ಮತ್ತು ನಿಹಾಲ್​ ತಾವ್ರೋ. ಇನ್ನು ಇದನ್ನು ನಿರ್ದೇಶನ ಮಾಡಿರುವುದು ಎಂ.ಎಸ್​. ಶಿವಾನಿ. ವಿಶೇಷವೆಂದರೆ, ನಟಿ ಕೃತ್ತಿಕಾ ರವೀಂದ್ರ ಅವರು ಈ ವಿಡಿಯೋ ಹಾಡಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇದುವರೆಗೂ ಮೆಂಟರ್​ ಆಗಿ ಹಲವು ಗಾಯಕ-ಗಾಯಕಿಯರನ್ನು ಸಂಗೀತ ಹೇಳಿಕೊಡುವ ಮತ್ತು ತಿದ್ದುವ ಕೆಲಸ ಮಾಡುತ್ತಿದ್ದ ಸುಚೇತನ್​ ಅವರು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸುಚೇತನ್​ ಅವರ ಈ ಮೊದಲ ಹಾಡು ಹೇಗಿದೆ ಎಂಬುದನ್ನು ನೀವೇ ನೋಡಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net