

ಚೆನ್ನೈ: ದಕ್ಷಿಣದಲ್ಲಿ ಕರ್ನಾಟಕದ ಹೊರತಾಗಿ ಬೇರೆ ರಾಜ್ಯಗಳಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಗದೆ ಹೆಣಗುತ್ತಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ಕೊಂಚ ಬಲ ಸಿಕ್ಕಿದೆ.
ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳ ಸಂಘದ ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷ ಅಣ್ಣಾಮಲೈ ಅವರು ಕಮಲ ಪಕ್ಷಕ್ಕೆ ಬರಮಾಡಿಕೊಂಡರು. ಅಣ್ಣಾಮಲೈ ಮತ್ತು ಪಕ್ಷದ ಹಿರಿಯ ನಾಯಕ ಎಚ್ ರಾಜಾ ಅವರು ರಜನಿಕಾಂತ್ ಅವರ ಅಭಿಮಾನಿಗಳಿಗೆ ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ಇತರೆ ಮಾಜಿ ಶಾಸಕರು ಸೇರಿದಂತೆ ಎಐಎಡಿಎಂಕೆ 15 ಮಾಜಿ ಶಾಸಕರು ಮತ್ತು ಒಬ್ಬ ಸಂಸದ ಸೇರಿದಂತೆ ಅನೇಕ ಮುಖಂಡರ ಗುಂಪು ಕೇಸರಿ ಪಕ್ಷ ಸೇರ್ಪಡೆಯಾಗಿತ್ತು.
ಸೋಮವಾರ (ಫೆ.11) ಇಂದು ನಡೆಯಲಿರುವ ಬಿಜೆಪಿಯ ಕೋರ್ ಕಮಿಟಿ ಸಭೆಗೆ ಮುನ್ನ ಈ ಕಾರ್ಯಕ್ರಮ ನಡೆದಿದ್ದು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸಂಬಂಧಿತ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ.
ಎಐಎಡಿಎಂಕೆ ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ತೃತೀಯ ರಂಗ ರಚನೆಗೆ ತೀವ್ರ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಇತರ ಪಕ್ಷಗಳ ನಾಯಕರನ್ನೂ ಸೇರಿಸಿ ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.