

ಬೆಂಗಳೂರು: ಚಿರು ಸರ್ಜಾ ನಿಧನರಾದ ಬಳಿಕ ಸರ್ಜಾ ಕುಟುಂಬದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಅದರಲ್ಲೂ ಗರ್ಭಿಣಿಯಾಗಿರುವ ಮೇಘನಾ ರಾಜ್ ಹೆರಿಗೆಯ ವಿಚಾರವನ್ನೂ ಕೆಲ ಯೂಟ್ಯೂಬ್ ವಾಹಿನಿಗಳು ಇಲ್ಲಸಲ್ಲದ ರೀತಿಯಲ್ಲಿ ಬಿಂಬಿಸುತ್ತಿವೆ. ಇದೆಲ್ಲದರ ವಿರುದ್ಧ ಇದೀಗ ಮೇಘನಾ ಗರಂ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಎರಡು ಯೂಟ್ಯೂಬ್ ವಾಹಿನಿಗಳ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡಿರುವ ಮೇಘನಾ, ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಮತ್ತು ಸೋಷಿಯಲ್ ಮೀಡಿಯಾ ಫಾಲೋವರ್ಸ್ಗಳಲ್ಲಿ ಮನವಿ ಮಾಡಿದ್ದಾರೆ.
ಅಷ್ಟಕ್ಕೂ ಹರಿದಾಡಿದ ಸುದ್ದಿಯಾದರೂ ಏನು? ‘ಮೇಘನಾಗೆ ಅವಳಿ ಮಕ್ಕಳಾಗಿವೆ. ಮಗು ಹಿಡಿದು ಕಣ್ಣೀರು ಹಾಕಿದ್ದಾರೆ. ಬೆಳ್ಳಂಬೆಳಗ್ಗೆ ಹೆರಿಗೆಗೆ ಹೋಗುವ ಮುನ್ನ ಚಿರು ಸಮಾಧಿ ಬಳಿ ಹೋಗಿ ಮೇಘನಾ ಮಾಡಿದ್ದೇನು.. ಎಂಬಿತ್ಯಾದಿ ಪ್ರಶ್ನೆಗಳನ್ನು ಸೇರಿಸಿ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಸುದ್ದಿಗಳನ್ನು ಕಂಡ ಮೇಘನಾ, ‘ಎಲ್ಲರಿಗೂ ನಮಸ್ಕಾರ, ಆದಷ್ಟು ಬೇಗನೇ ನಾನೇ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ಅಲ್ಲಿಯವರೆಗೂ ದಯಮಾಡಿ ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ಗಳಲ್ಲಿ ಮಾಡಿಕೊಳ್ಳುವ ಮನವಿ ಏನೆಂದರೆ, ಇಂಥ ಸುಳ್ಳು ಸುದ್ದಿಗಳತ್ತ ಗಮನ ಹರಿಸಬೇಡಿ. ಸತ್ಯ ಏನೆಂದು ತಿಳಿಯದೇ ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಈ ರೀತಿ ಮಾಡುತ್ತಿರುತ್ತಾರೆ. ಹಾಗೇನಾದರೂ ಹೇಳುವುದಿದ್ದರೆ ನಾನೇ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ.