

ಬೆಂಗಳೂರು: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಕಾಟೇರ' ಚಿತ್ರವು ಇದೇ ಡಿ.29ರಂದು ತೆರೆಗೆ ಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬಹುತೇಕ ಚಿತ್ರಮಂದಿಗರಳಲ್ಲಿ ಭರ್ಜರಿ ಓಪನಿಂಗ್ ಪಡೆಯುವ ಮುಖೇನ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಜ್ಜಾಗಿದೆ. ಸದ್ಯ ಈ ಚಿತ್ರ ಬಿಡುಗಡೆಗೂ ಮುನ್ನವೇ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಷ್ಟಕ್ಕೂ ಏನದು? ಇದು ವದಂತಿಯೋ ಅಥವಾ ಅಸಲಿ ಸಂಗತಿಯೋ? ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ಸಿನಿಮಾದಲ್ಲಿ ದರ್ಶನ್ ಅಭಿನಯಿಸುತ್ತಿದ್ದು. ಈ ಚಿತ್ರಕ್ಕೆ ಟಾಲಿವುಡ್ನ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಿನಿ ವರದಿಗಳು ಹೇಳುತ್ತಿವೆ. ಈ ಹಿಂದೆ ದರ್ಶನ್ ಜತೆಗೆ 'ಕರಿಯ' ಸಿನಿಮಾವನ್ನು ಮಾಡಿದ್ದ ಪ್ರೇಮ್, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ದರ್ಶನ್-ಪ್ರೇಮ್ ಅವರ ಕಾಂಬಿನೇಷನ್ ಅನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಬಹುದಾಗಿದೆ.
ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದು, ಟಾಲಿವುಡ್ನ ಮೆಗಾಸ್ಟಾರ್, ನಟ ಚಿರಂಜೀವಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಬಲವಾದ ಕಾರಣ, ಇತ್ತೀಚೆಗಷ್ಟೇ ಪ್ರೇಮ್ ಹೈದರಾಬಾದ್ಗೆ ತೆರಳಿ, ಚಿರಂಜೀವಿ ಅವರಿಗೆ ಕಥೆ ವಿವರಿಸಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡ ಮೆಗಾಸ್ಟಾರ್ ಅವರ ಒಪ್ಪಿಗೆ ನಿರೀಕ್ಷಿಸುತ್ತಿದ್ದು, ಮುಂದಿನ ವರ್ಷ ಜೂನ್ 2024ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).