More

    ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಆಕ್ರೋಶ: ಮಂಡ್ಯದಲ್ಲಿ ರೈತ ಸಂಘದಿಂದ ಪ್ರತಿಭಟನೆ

    ಮಂಡ್ಯ: ಸಾಲಮನ್ನಾ ಬಯಸಿ, ರೈತರು ಬರಗಾಲ ಬರಲಿ ಎನ್ನುವುದನ್ನೇ ಕಾಯುತ್ತಿದ್ದಾರೆಂದು ನಾಲಗೆ ಹರಿಬಿಟ್ಟ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಂತೆಯೇ ಮಂಗಳವಾರ ನಗರದಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
    ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಶಿವಾನಂದ ಪಾಟೀಲ್ ಅವಿವೇಕಿ, ಅಯೋಗ್ಯ ಎಂದು ಧಿಕ್ಕಾರ ಕೂಗುವುದರ ಜತೆಗೆ ಸಚಿವನ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾಲಿನಲ್ಲಿ ತುಳಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
    ಪರಿಹಾರ ಸಿಗಲಿದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಈ ಹಿಂದೆ ನಾಲಗೆ ಹರಿಬಿಟ್ಟಿದ್ದ ಶಿವಾನಂದ ಪಾಟೀಲ್, ರೈತರನ್ನ ಅವಮಾನಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಇಂತಹ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಆಗಿದ್ದು, ಸಂಪುಟದಿಂದ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸುವುದರ ಜತೆಗೆ ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
    ರೈತರ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಒಂದು ಕೋಟಿ ರೂ ನೀಡುತ್ತೇವೆ. ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಕಟುವಾಗಿ ಟೀಕಿಸಿದ ಪ್ರತಿಭಟನಾಕಾರರು, ಶಿವಾನಂದ ಪಾಟೀಲರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಒಂದೂವರೆ ರೂ ಕಡಿತ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಮಲ್ಲಿಗೆರೆ ಅಣ್ಣಯ್ಯ, ಮಲ್ಲನಾಯಕನಕಟ್ಟೆ ವಿಜಯ್ ಕುಮಾರ್, ಜಗದೀಶ್, ಸೋಮಣ್ಣ ಕೀಲಾರ, ಇಂಡುವಾಳು ಸಿದ್ದೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts