More

  ಚುಟುಕು ಸಾಹಿತ್ಯದ ಮೂಲವೇ ಭಗವದ್ಗೀತೆ

  ಸುಗುಣೇಂದ್ರ ಶ್ರೀ ಆಶೀರ್ವಚನ — ರಾಜಾಂಗಣದಲ್ಲಿ 5ನೇ ಸಮ್ಮೇಳನ ಉದ್ಘಾಟನೆ

  ವಿಜಯವಾಣಿ ಸುದ್ದಿಜಾಲ ಉಡುಪಿ
  ವಿಸ್ತೃತ ಸಾಹಿತ್ಯ ಓದಲು ಯಾರಿಗೂ ಈಗ ತಾಳ್ಮೆ ಇಲ್ಲ. ಹೀಗಾಗಿ ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಲಭಿಸುತ್ತಿದೆ. ಈ ಸಾಹಿತ್ಯದ ಮೂಲವೇ ಭಗವದ್ಗೀತೆಯಾಗಿದ್ದು, ಗೀತಾಚಾರ್ಯನಾದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

  ಉಡುಪಿಯ ಕೃಷ್ಣ ಮಠದ ರಾಜಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ಪರ್ಯಾಯ ಪುತ್ತಿಗೆ ಮಠದ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಕರಾವಳಿ ಕರ್ನಾಟಕದ 5ನೇ ಕಚುಸಾಪ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

  ಜನರಿಗೆ ಪುರುಸೊತ್ತಿಲ್ಲ ಯುಗ

  ಇಂದಿನ ಜನರಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪುರುಸೊತ್ತಿಲ್ಲ. ಬರುತ್ತೇನೆ ಎಂದು ಹೇಳುತ್ತಾರೆ, ಆದರೆ ಬರುವುದಿಲ್ಲ. ಯಾಕೆಂದು ಕೇಳಿದರೆ ಪುರುಸೊತ್ತು ಇರಲಿಲ್ಲ ಎನ್ನುತ್ತಾರೆ. ಹೀಗಾಗಿ ಬ್ರಹ್ಮಾಂಡ ಸಾಹಿತ್ಯಕ್ಕೆ ಉಳಗಾಲವಿಲ್ಲ. ಅತ್ಯಂತ ಪ್ರಭಾವಿ ಹಾಗೂ ಪರಿಣಾಮಕಾರಿಯಾಗಿರುವ ಚುಟುಕು ಸಾಹಿತ್ಯ ಎಂದಿಗೂ ಉಳಿಯಬಲ್ಲುದಾಗಿದೆ. ಹಿಂದಿನ ಯುವ ಸಮುದಾಯಕ್ಕೆ ಕಲೆ, ಧಾರ್ಮಿಕತೆಯಲ್ಲಿ ಆಸಕ್ತಿ ಇತ್ತು. ಇಂದಿನ ಮಕ್ಕಳಿಗೆ ಸಾಹಿತ್ಯ ಜ್ಞಾನ ಕಡಿಮೆ ಇದ್ದು, ಯುವ ಸಮುದಾಯವನ್ನು ಚುಟುಕು ಸಾಹಿತ್ಯದತ್ತ ಆಕರ್ಷಿಸುವ ಅಗತ್ಯತೆ ಇದೆ ಎಂದರು.

  ಮೂರು ಪುಸ್ತಕ ಬಿಡುಗಡೆ

  ಪ್ರೊ.ಜಿ.ಯು. ನಾಯಕ ಅವರ ಸಂಜೆ ಮಲ್ಲಿಗೆ, ಎನ್.ವಿ. ರಮೇಶ ಅವರ ಕಾಶೀಯಾತ್ರೆ ಹಾಗೂ ಕೃಷ್ಣ ಪದಕಿ ಅವರ ಸಂದಕುಮಾರನ ಕಗ್ಗಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ‘ಭಗವದ್ಗೀತೆ ಒಂದು ವಿಶ್ಲೇಷಣೆ’ ವಿಚಾರಗೋಷ್ಠಿ, ‘ಕೃಷ್ಣನ ಗುಂಗು’ ಕವಿಗೋಷ್ಠಿ ನಡೆಯಿತು. ಡಾ. ವಾಣಿಶ್ರೀ ಹಾಗೂ ಗುರುರಾಜ ಕಾಸರಗೋಡು ಅವರ ಕಲಾ ತಂಡದಿಂದ ನೃತ್ಯ ವೈಭವ ಜರುಗಿತು. ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತಿ ಡಾ. ಜಿ.ಯು. ನಾಯ್ಕ್​ ಉಪಸ್ಥಿತರಿದ್ದರು.

  ಮಹಿಳಾ ಘಟಕದ ಕಾರ್ಯದರ್ಶಿ ಡಾ. ವಂದನಾ ರಮೇಶ್​ ಪ್ರಾರ್ಥಿಸಿದರು. ಉಡುಪಿ ಘಟಕದ ಕಾರ್ಯದರ್ಶಿ ರಾಜು ಆಚಾರ್ಯ ಸ್ವಾಗತಿಸಿದರು. ಪರಿಷತ್​ನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಕಾರ್ಯದರ್ಶಿ ಸೋಮಶೇಖರ್​ ಶೆಟ್ಟಿ ವಂದಿಸಿದರು. ದಕ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಹಾಗೂ ಕಾರ್ಯದರ್ಶಿ ಶಾಂತಾ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.

  ಮಕ್ಕಳಿಗೆ ಸಂಸ್ಕಾರ ನೀಡುವ ಮಾಧ್ಯಮ

  ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಸುಶೀಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಬೃಹತ್ತಾಗಿರುವ ಶಾಸ್ತ್ರ, ಲಕ್ಷಗಟ್ಟಲೆ ಶ್ಲೋಕ ಇರುವ ಮಹಾಭಾರತ ಓದಲು ಜನರು ಸಿದ್ಧರಿಲ್ಲ. ಭಗವದ್ಗೀತೆ ಓದಲೂ ಸಮಯವಿಲ್ಲದ್ದರಿಂದ 15ನೇ ಅಧ್ಯಾಯ ಪಠಿಸಿ ಎಂದರೆ ಮನಸ್ಸಿಲ್ಲ. ಹೀಗಾಗಿ 15ನೇ ಅಧ್ಯಾಯಯದ 4 ಶ್ಲೋಕ ಮಾತ್ರ ಚುಟುಕಾಗಿ ಓದುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಚುಟುಕು ಸಾಹಿತ್ಯದ ಮೂಲಕ ಮಕ್ಕಳಿಗೆ ಪರಿಣಾಮಕಾರಿಯಾಗಿ ಸಂಸ್ಕಾರ ನೀಡಬಹುದಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ ಯುವ ಸಾಹಿತಿಗಳು ಹೆಚ್ಚಿನ ಸಾಧನೆ ಮಾಡಬಹುದಾಗಿದೆ ಎಂದರು.

  ಇಂಗ್ಲಿಷ್​ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡ ಭಾಷೆ ಣಿಸತೊಡಗಿದೆ. ಹೀಗಾಗಿ ರಾಜ್ಯ ಸರ್ಕಾರ ಕನ್ನಡದ ಉಳಿವಿಗೆ ಪ್ರೋತ್ಸಾಹ, ಪೂರಕ ಕಾರ್ಯಕ್ರಮ ಆಯೋಜಿಸಬೇಕು. ಅಂತೆಯೇ ಚುಟುಕು ಸಾಹಿತ್ಯಕ್ಕೆ ಹಾಗೂ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ.

  ಡಾ. ಹರಿಕೃಷ್ಣ ಪುನರೂರು. ಮಾಜಿ ಅಧ್ಯಕ್ಷ, ಕಸಾಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts