ಭದ್ರಕೋಟೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆಘಾತ: ನಿರೀಕ್ಷಿತ ಫಲ ನೀಡದ ರಾಮಮಂದಿರ ಉದ್ಘಾಟನೆ

Modi Amit Shah vvani
Published on

ನವದೆಹಲಿ: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಎನ್​ಡಿಎ ಒಕ್ಕೂಟಕ್ಕೆ ಬಿಗ್​ ಶಾಕ್ ಎದುರಾಗಿದೆ. ಲೋಕಸಭಾ ಚುನಾವಣೆಯ ಮತಎಣಿಕೆಯ ಸದ್ಯದ ಟ್ರೆಂಡ್​ ಪ್ರಕಾರ​ ಇಂಡಿ ಒಕ್ಕೂಟ ಮುನ್ನಡೆಯನ್ನು ಸಾಧಿಸಿದೆ. ಕಳೆದ ಬಾರಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಕ್ಲೀನ್​ ಸ್ವೀಪ್​ ಮಾಡಿತ್ತು. ಆದರೆ, ಈ ಬಾರಿ

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಸಮಯದಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಎಸ್​ಪಿ ಮತ್ತು ಸಮಾಜವಾದಿ ಪಕ್ಷ ಕ್ರಮವಾಗಿ 10 ಮತ್ತು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಕಾಂಗ್ರೆಸ್​ ಕೇವಲ 1 ಸ್ಥಾನದಲ್ಲಿ ಮಾತ್ರ ಗೆದ್ದಿತ್ತು.

ಈ ಬಾರಿ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನೆಡೆಯಾಗಿದೆ. 80 ಸ್ಥಾನಗಳಲ್ಲಿ ಬಿಜೆಪಿ 75 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ ಮತ್ತು ಉಳಿದ 5 ಸ್ಥಾನಗಳನ್ನು ತನ್ನ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿತ್ತು. ಇದೀಗ ಮತಎಣಿಕೆಯಲ್ಲಿ 34 ಸ್ಥಾನಗಳಲ್ಲಿ ಮಾತ್ರ ಎನ್​ಡಿಎ ಮುನ್ನಡೆ ಸಾಧಿಸಿದೆ. ಈ ಬಾರಿ ಬಿಎಸ್​ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಈವರೆಗೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಇನ್ನು ಸಮಾಜವಾದಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಇಂಡಿ ಒಕ್ಕೂಟ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಎನ್​ಡಿಎಗೆ ಟಕ್ಕರ್​ ಕೊಡುತ್ತಿದೆ. ಇತರೆ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಭದ್ರಕೋಟೆಯಂತಿದ್ದ ಉತ್ತರ ಪ್ರದೇಶದಲ್ಲಿ ಈ ಬಾರಿ ಇಂಡಿ ಒಕ್ಕೂಟ ಕಮಾಲ್​ ಮಾಡಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ 67 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್​ 17 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಂತಹ ಅದ್ಧೂರಿ ಕಾರ್ಯಕ್ರಮ ನಡೆದಾಗ ಇಡೀ ದೇಶದ ಚಿತ್ತ ಉತ್ತರ ಪ್ರದೇಶದತ್ತ ನೆಟ್ಟಿತ್ತು. ಪ್ರಧಾನಿ ಮೋದಿ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಕಾರ್ಯಕ್ರಮ ನಡೆದ ರೀತಿ ನೋಡಿದ ಮಂದಿ ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಕ್ಲೀನ್​ ಸ್ಪೀಪ್​ ಮಾಡಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಹಾಕಿದ್ದರು. ಆದರೆ, ಆ ಲೆಕ್ಕ ಸದ್ಯ ಟ್ರೆಂಡ್​ ನೋಡಿದರೆ, ಉಲ್ಟಾ ಆಗಿದೆ.

ಬಿಜೆಪಿ ತನ್ನ ಹಳೆಯ ಮಿತ್ರ ಪಕ್ಷವಾದ ಅಪ್ನಾ ದಳಕ್ಕೆ (ಸೋನೆಲಾಲ್) ಅಂಟಿಕೊಂಡಿರುವುದಲ್ಲದೆ, ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಮತ್ತು ಒಪಿ ರಾಜ್‌ಭರ್‌ನ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವನ್ನು ಎನ್‌ಡಿಎ ತೆಕ್ಕೆಗೆ ತಂದಿದೆ. ಕಾಂಗ್ರೆಸ್ ಪಾಲಿಗೆ ಅದರ ಕುಟುಂಬದ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ ಬರೇಲಿ ಪ್ರತಿಷ್ಠೆಯ ಕದನವಾಗಿದೆ. ಕಳೆದ ಬಾರಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು. ಬೆಳಗ್ಗೆ 11 ಗಂಟೆಯ ಹೊತ್ತಿಗೆ, ಇರಾನಿ ಅವರು ಗಾಂಧಿ ಕುಟುಂಬದ ನಿಷ್ಠಾವಂತ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಅವರಿಗಿಂತ ಹಿನ್ನಡೆ ಅನುಭವಿಸಿದ್ದಾರೆ. ರಾಯ್ ಬರೇಲಿಯಲ್ಲಿ ಗಾಂಧಿ ಅವರು 60,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಮಧ್ಯಾಹ್ನ 12.01ರ ಟ್ರೆಂಡ್​ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 290ರಲ್ಲಿ ಮತ್ತು ಕಾಂಗ್ರೆಸ್​ 232ರಲ್ಲಿ ಹಾಗೂ ಇತರೆ 21 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್​ 10 ಮತ್ತು ಜೆಡಿಎಸ್​ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net