ಪಣಿಯೂರು-ಬೆಳಪು ರಸ್ತೆ ದುರಸ್ತಿ

road repair
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಬೆಳಪು ಕೈಗಾರಿಕಾ ಪ್ರದೇಶದಲ್ಲಿ 54 ಕೈಗಾರಿಕಾ ಘಟಕಗಳು ಆರಂಭಗೊಳ್ಳಲಿದ್ದು, ಈಗಾಗಲೇ ಹಲವಾರು ಸಣ್ಣ ಕೈಗಾರಿಕೆಗಳು ಕಾರ್ಯಾರಂಭವಾಗಿವೆ. ಕೈಗಾರಿಕಾ ಕೇಂದ್ರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಪಣಿಯೂರು -ಬೆಳಪು ಸಂಪರ್ಕ ರಸ್ತೆ ಹದಗೆಟ್ಟಿದ್ದು, ಅದನ್ನು ವಿಸ್ತರಿಸಿ ಅಭಿವೃದ್ಧಿಪಡಿಸಲು ಶಾಸಕ ಹಾಗೂ ಸಂಸದರು ಒಪ್ಪಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಬೆಳಪು ಕೈಗಾರಿಕಾ ಪಾರ್ಕ್‌ನಲ್ಲಿ ಕೆಐಎಡಿಬಿ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಈ ರಸ್ತೆ ಅಭಿವೃದ್ಧಿಪಡಿಸಲು ಕೆಐಎಡಿಬಿ 6 ಕೋಟಿ ರೂ.ಗಳ ಯೋಜನಾ ವರದಿ ಸಿದ್ಧಪಡಿಸಿದ್ದು, 2.70 ಎಕರೆ ಜಾಗ ರೈತರಿಂದ ಭೂಸ್ವಾಧೀನಪಡಿಸಿಕೊಂಡಿದೆ ಎಂದರು.

ಕೈಗಾರಿಕಾ ಸ್ಥಳಗಳ ಕ್ರಯಾಸಾಧನ ಮಾಡಿ ಕೈಗಾರಿಕೆಯ ಮಾಲೀಕರಿಗೆ ನೀಡಬೇಕು ಎಂದು ಎಸ್‌ಎನ್ ಕ್ರಯೋಜನಿಕ್ಸ್ ಆಡಳಿತ ನಿರ್ದೇಶಕ ನಟರಾಜ ಹೆಗ್ಡೆ ಕೆಐಎಡಿಬಿ ಅಧಿಕಾರಿಗಳಿಗೆ ಮನವಿ ಮಾಡಿದರು. ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರ್ಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿ ವಾಸಿಸುತ್ತಿದ್ದ ಸ್ಥಳ ಮಂಜೂರು ಮಾಡಿ ಕೊಡಬೇಕು. ಈ ಪ್ರದೇಶದ ಕಾರ್ಖಾನೆಗಳ ತೆರಿಗೆಯನ್ನು ಗ್ರಾಪಂ ಪಾವತಿಸುವಂತೆ ದೇವಿ ಪ್ರಸಾದ್ ಶೆಟ್ಟಿ ವಿನಂತಿಸಿದರು. ಅದಕ್ಕೆ ಕೆಐಎಡಿಬಿ ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ದನಿಗೂಡಿಸಿದರು.
ಕೆಐಎಡಿಬಿ ಸಹಾಯಕ ಆಯುಕ್ತ ರಾಜು, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸೀತಾರಾಮ ಶೆಟ್ಟಿ ಡಿಐಸಿ ಉಡುಪಿ, ದತ್ತಾತ್ರಿ, ಗಣಪತಿ, ರತ್ನಾಕರ್ ಹಾಗೂ ಕೈಗಾರಿಕಾ ಘಟಕಗಳ ಮಾಲೀಕ ವಸಂತ ಹೆಗ್ಡೆ, ಹರೀಶ್ ನಾಯಕ್, ಸುಧಾಕರ್ ಶೆಟ್ಟಿ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ, ದುರ್ಗಾ ನಾಯ್ಕ, ಉಪಸ್ಥಿತರಿದ್ದರು

ಸ್ಥಳೀಯರಿಗೆ ಉದ್ಯೋಗ

ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆ, ತ್ಯಾಜ್ಯ, ಹರಿಯುವ ನೀರಿನ ಚರಂಡಿಗಳು ಸರಿಯಾಗಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿದೆ ಎಂದು ಕೆಇಡಿಬಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಜತೆಗೆ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು ಎಂದು ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net